ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ. ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾಡ್ತೀವಿ ಅಂದ್ರೆ ಏನು ಅರ್ಥ. ಅಂದ್ರೆ ಮುಂದಿನ ಸಿಎಂ ಅವರೇ ಎಂದರ್ಥ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ದಾವಣಗೆರೆಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳೋದು ಅದೇ ಅರ್ಥ. ನಾನು ಹೇಳೊದು ಅದೇ ಅರ್ಥ ಎಂದು ಹೇಳಿದರು.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಚಿವ ಆರ್. ಅಶೋಕ್ ಹಾಗೂ ನನ್ನ ನಡುವೆ ಯಾವುದೇ ಫೈಟ್ ಇಲ್ಲ. ಯಾರನ್ನು ನೇಮಿಸಬೇಕೆಂಬುದು ಸಿಎಂ ಬೊಮ್ಮಾಯಿ ಅವರ ಪರಮಾಧಿಕಾರ. ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ಕೊಟ್ಟರೇನು ಬಿಡಪ್ಪ. ಅದು ಮುಗಿದ ಅಧ್ಯಾಯ. ನಾನು ಒಂದೇ ಸಾರಿ ಹೇಳೋದು, ಎರಡನೇ ಸಾರಿ ಹೇಳಿದ್ರೆ ಮಜಾ ಸಿಗಲ್ಲ. ಹಾಗಾಗಿ ಒಂದು ಬಾರಿ ಹೇಳಿದ್ದೀನಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸದ್ಯಕ್ಕೆ ತೊಂದರೆ ಏನಿಲ್ಲ. ಮತ್ತೆ 2023ಕ್ಕೆ ನಾವು ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದ ಅವರು, ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಹಾನಗಲ್ ನಲ್ಲಿ ಶೇ. 83 ಹಾಗೂ ಸಿಂಧಗಿಯಲ್ಲಿ ಶೇಕಡಾ 69ರಷ್ಟು ಮತದಾನವಾಗಿದೆ. ಸಿಂಧಗಿಯಲ್ಲಿ 18ರಿಂದ 20 ಸಾವಿರ ಅಂತರದಿಂದ ಗೆಲ್ತೀವಿ. ಹಾನಗಲ್ ಕೂಡ ನಾವೇ ಜಯಭೇರಿ ಬಾರಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
PublicNext
31/10/2021 12:31 pm