ಸಿಂದಗಿ(ವಿಜಯಪುರ ಜಿಲ್ಲೆ): ದೇಶದಲ್ಲಿ ಕಾಂಗ್ರೆಸ್‌ನ ಕತೆ ಮುಗಿದಿದೆ. ಅದು ಈಗ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿದ್ದವರು, ಶಾಸಕ, ಸಂಸದರಾಗಿದ್ದವರೇ ಆ ಪಕ್ಷವನ್ನು ತೊರೆದು ತಮಗೆ ಬೇಕಾದ ಸುರಕ್ಷಿತ ವಲಯವನ್ನು ಸೇರಿಕೊಳ್ಳುತ್ತಿದ್ದಾರೆ. ಶತಹುಂಬರು, ಗುಲಾಮರು, ಮೂರ್ಖರು ಹಾಗೂ ತಮ್ಮನ್ನು ತಾವು ಮಾರಿಕೊಂಡವರು ಮಾತ್ರ ಆ ಪಕ್ಷಲ್ಲಿ ಇರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸಿಂದಗಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರಾಜೀವ್ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಯೋದು ಅವರಿಗೆ ಗೊತ್ತಿತ್ತು. ಪ್ರತಿ ನೂರು ರುಪಾಯಿ ಬಿಡುಗಡೆ ಆದಾಗ ಅದರಲ್ಲಿ ಹದಿನೈದು ರೂ. ಮಾತ್ರ ಅದರ ನೈಜ ಫಲಾನುಭವಿಗೆ ದೊರೆಯುತ್ತಿದೆ ಎಂದು ಸ್ವತಃ ರಾಜೀವ್ ಗಾಂಧಿ ಅವರೇ ಹೇಳಿದ್ದರು. ಆದರೂ ನಡುವೆ ತಿನ್ನುವವರನ್ನು ನಿಯಂತ್ರಿಸಲು ರಾಜೀವ್ ಗಾಂಧಿ ಕ್ರಮ ಕೈಗೊಳ್ಳಲಿಲ್ಲ. ಈಗಲೂ ಕಾಂಗ್ರೆಸ್‌ನಲ್ಲಿ ಇದೇ ರೀತಿ ಇದೆ ಎಂದು ಸಿ.ಟಿ ರವಿ ಹೇಳಿದರು.
ಕೋವಿಡ್ ವ್ಯಾಕ್ಸಿನ್ನಲ್ಲಿ ಭಾರತ ವಿಶ್ವ ದಾಖಲೆ ಮಾಡಿದೆ. ಜಗತ್ತಿನ ಯಾವ ರಾಷ್ಟ್ರ ಮಾಡದ ಸಾಧನೆ ಭಾರತ ಮಾಡಿದೆ. ಕೊರೋನಾ ನಂತರ ಆರ್ಥಿಕ ಸಂಕಷ್ಟ ಎದುರಾಯಿತು. ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂಕಷ್ಟದ ಬಿಸಿ ಭಾರತಕ್ಕೂ ತಟ್ಟಿದೆ. ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 55 ಡಾಲರ್ ಇತ್ತು. ಈಗ ಒಂದು ಬ್ಯಾರಲ್ಗೆ 110 ಆಗಿದೆ. ಬೆಲೆ ಏರಿಕೆಗೆ ಪ್ರಧಾನಿ ಮೋದಿ ಹೊಣೆಯಲ್ಲ. ಇದು ಕೇವಲ ತಾತ್ಕಾಲಿಕ ಎಂದ ಸಿ.ಟಿ ರವಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
PublicNext
25/10/2021 09:39 pm