ವಿಜಯಪುರ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಸಿಂಧಗಿಯಲ್ಲಿ ನಡೆದ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ' ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, "ಹೌದು. ನಾನು ಜಾತಿವಾದಿ ಏನಿವಾಗ" ಎಂದು ಟಾಂಗ್ ಕೊಟ್ಟಿದ್ದಾರೆ.
"ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ.. ಹೌದು, ನಾನು ಜಾತಿವಾದಿ. ಏನೀಗ ಬಿಜೆಪಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರ ಟ್ವೀಟ್‌ನಲ್ಲಿ ಏನಿದೆ?:
ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ. ಇದು ಜಾತಿವಾದವೇ..?
ನಮ್ಮ ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂಪಾಯಿಗಳನ್ನು ನೀಡಿತ್ತು. ರಾಜ್ಯ ಸರ್ಕಾರ ಈ ಅನುದಾನವನ್ನು ಬರೀ 10 ಕೋಟಿಗೆ ಇಳಿಸಿದೆ. ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದವನು ನಾನೆ. ಇದು ಜಾತಿವಾದವೇ?
ತಾಂಡಾಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ “ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ” ಯನ್ನು ಜಾರಿಗೊಳಿಸಿ, ಲಕ್ಷಾಂತರ ಬಡ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಇದು ಜಾತಿವಾದವೇ?
PublicNext
25/10/2021 05:55 pm