ವಿಜಯಪುರ: ಸಿಂದಗಿ ಉಪಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಅಲ್ಲಿದ್ದ ಅಲ್ಪಸಂಖ್ಯಾತರಿಗೆ ಪ್ರಶ್ನೆ ಕೇಳಿದ್ದಾರೆ. ನಾನು ಎಂದಾದರೂ ಅಲ್ಪಸಂಖ್ಯಾತರರಿಗೆ ಮೋಸ ಮಾಡಿದ್ದೇನಾ? ಮಾಡಿದ್ದರೆ ಒಂದು ಉದಾಹರಣೆ ಕೊಡಿ ಆಗ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಸಿಂದಗಿ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಬಿಎಸ್‌ವೈ ಮೋದಿ ಅವರು ಎಲ್ಲ ವರ್ಗದ ಜನರನ್ನು ಒಂದೇ ತಾಯಿ ಮಕ್ಕಳಂತೆ ನೋಡ್ತಿದ್ದಾರೆ. ನಾನು ಸಿಎಂ ಆದ ವೇಳೆಯೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವ ಮಾಡಿಲ್ಲ. ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ನೀಡಿ. ಬಹು ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳಿದ್ದೀರಿ. ನಮ್ಮ ಐವರು ಸಚಿವರು ಇಲ್ಲಿದ್ದಾರೆ, ಇವರು ಮತ್ತು ನಾವೆಲ್ಲ ಸೇರಿ ಸಿಂದಗಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದ ಬಿ.ಎಸ್ ಯಡಿಯೂರಪ್ಪ ಮನವಿ ಜನತೆಗೆ ಮನವಿ ಮಾಡಿದರು.
ಕಾಂಗ್ರೆಸ್ ನಾಯಕರು ನಿತ್ಯ ಅಪಪ್ರಚಾರ ಮಾಡುತ್ತಿದ್ದೀರಿ. ಚೀಲದಲ್ಲಿ ಹಣ ತಂದು ಬಿಜೆಪಿ ಕೊಡ್ತಿದೆ ಎಂದು ಹೇಳ್ತಿದ್ದೀರಿ. ಹಣ, ಹೆಂಡ ಹಂಚಿ ಅಧಿಕಾರ ಮಾಡಿದವರು ನೀವು. ಈ ಎರಡೂ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ಆಮೇಲೆ ನಿಮ್ಮ ಅಪಪ್ರಚಾರಗಳಿಗೆ ತಕ್ಕ ಉತ್ತರ ಕೊಡಲಿದ್ದೇವೆ. ಹೆಣ್ಣು ಹುಟ್ಟಿದ್ರೆ ಕಣ್ಣೀರು ಹಾಕ್ತಿದ್ದ ಕಾಲದಲ್ಲಿ ಅವಳಿಗೆ ಭಾಗ್ಯಲಕ್ಷ್ಮಿ ಎಂದು ಕರೆದಿದ್ದು ಯಡಿಯೂರಪ್ಪ. ರೈತರ ಪಂಪಸೆಟ್ ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡೋಣ ಎಂದು ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಭೂಸನೂರ ಅವರ ಗೆಲುವು ನಿಮ್ಮ ಗೆಲುವು ಎಂದು ತಿಳಿದುಕೊಳ್ಳಿ, ದಯಮಾಡಿ ಮೋಸ ಹೋಗಬೇಡಿ. ಕೇವಲ ಭಾಷಣ ಕೇಳಿ ಹೋಗೋದರಿಂದ ಪರಿಹಾರ ಸಿಗಲ್ಲ. ನೀವೆಲ್ಲವೂ ಕಾಂಗ್ರೆಸ್ ವ್ಯಾಮೋಹದಲ್ಲಿರುವವರಿಗೆ ಬುದ್ದಿಹೇಳಿ ಬಿಜೆಪಿಗೆ ಮತ ಕೊಡಿಸಬೇಕಿದೆ. ನಮ್ಮ ಮಂತ್ರಿಗಳು ಸಮಸ್ಯೆಗಳ ಬಗ್ಗೆ ಎಲ್ಲವನ್ನೂ ನೋಟ್ ಮಾಡಿಕೊಳ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದ ಯಡಿಯೂರಪ್ಪ ಮತದಾರರಿಗೆ ಭರವಸೆ ನೀಡಿದ್ದಾರೆ.
PublicNext
21/10/2021 09:46 pm