ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳಷ್ಟೇ ಬಾಕಿಯಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈಗಾಗಲೇ ಕಾಂಗ್ರೆಸ್ ಬಿಟ್ಟು ಹೊರ ಬಂದಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಕ್ಯಾಪ್ಟನ್ ಸಿಂಗ್ ಅವರ ನಡೆ ಸ್ಪಷ್ಟವಾಗಿದೆ.
ಹೌದು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರತ್ಯೇಕ ಪಕ್ಷ ಸ್ಥಾಪಿಸಿ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಟ್ವೀಟ್ ಮಾಡಿದ್ದು, "ಪಂಜಾಬ್ ರಾಜ್ಯದ ಜನರ ಹಿತಾಸಕ್ತಿ ಕಾಪಾಡಲು ಅಮರಿಂದರ್ ಸಿಂಗ್ ಪ್ರತ್ಯೇಕ ಪಕ್ಷ ಸ್ಥಾಪಿಸಲಿದ್ದಾರೆ" ಎಂದು ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಅಮರಿಂದರ್ ಸಿಂಗ್ ಚಿಂತಿಸಿದ್ದು, ಕೃಷಿ ಕಾಯ್ದೆ ಸಮಸ್ಯೆ ಬಗೆಹರಿಸಿದ್ರೆ ಮೈತ್ರಿಗೆ ಸಿದ್ಧ ಎಂದು ಕ್ಯಾಪ್ಟನ್ ಹೇಳಿದ್ದಾರೆ. ಹಾಗೆ ಅಕಾಲಿದಳದ ಬೇರ್ಪಟ್ಟ ಸಮಾನ ಮನಸ್ಕ ಬಣಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಧಿಂಡ್ಸಾ ಹಾಗೂ ಬ್ರಹ್ಮಪುರ ಬಣಗಳ ಜೊತೆ ಮೈತ್ರಿ ನಿರೀಕ್ಷಿಸುತ್ತಿದ್ದೇವೆ ಅಂತ ತಿಳಿಸಿದ್ದಾರೆ.
PublicNext
20/10/2021 07:25 am