ಹುಬ್ಬಳ್ಳಿ: 'ನನ್ನ ಬದುಕಿನ ಕೊನೆ ಘಟ್ಟದಲ್ಲಿದ್ದೇನೆ. ಇನ್ನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ. ಹೀಗಾಗಿ ನನಗೆ ಮತ ಭಿಕ್ಷೆ ನೀಡಿ' ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಪಬ್ಲಿಕ್ ನೆಕ್ಸ್ಟ್ ಓದುಗರು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ.
'ಸಾಯೋ ವಯಸ್ಸು ಆದರೂ ನಿಮಗೆ ಮತವೇ ಮುಖ್ಯವಾಯಿತೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಿ. ಆಗ ಮತಗಳು ತಾವಾಗಿಯೇ ಬರುತ್ತವೆ ಎಂದು ಪಬ್ಲಿಕ್ ನೆಕ್ಸ್ಟ್ ಓದುಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, 'ಶಿವ ಶಿವಾ ಎನ್ನುವ ಕಾಲದಲ್ಲಿ ಯಾಕೆ ಸ್ವಾಮಿ ಈ ಭಿಕ್ಷಾಟನೆ?' ಎಂದರೆ, ಮತ್ತೊಬ್ಬರು, 'ಓರ್ವ ಮಾಜಿ ಪ್ರಧಾನಿಯಾಗಿ ವಿಷಯಾಧಾರಿತವಾಗಿ ಮಾತು ಕೇಳಬೇಕೆ ಹೊರತು ಹೀಗೆ ಕೊನೆಯ ಅವಕಾಶ ನೀಡಿ ಎಂದು ಕೇಳುವುದು ಸರಿಯಲ್ಲ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಪ್ರತಿಬಾರಿ ಚುನಾವಣೆ ಬಂದಾಗ ನಿಮ್ಮದು ಇದೇ ಡೈಲಾಗ್' ಎಂದು ವ್ಯಂಗ್ಯವಾಡಿದ್ದಾರೆ.
ದೇವೇಗೌಡರು ಹೇಳಿದ್ದೇನು?:
ಜೆಡಿಎಸ್ ಶಾಸಕ ಎಂ.ಸಿ ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನ ಸಭಾ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಸೋಮವಾರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ದೇವೇಗೌಡ ಅವರು, ನನಗೆ ಈಗಾಗಲೇ 89 ವರ್ಷ ಆಗಿದೆ. ನಾನು ಜೀವನದ ಕೊನೆ ಘಟ್ಟದಲ್ಲಿದ್ದೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕು. ಅದನ್ನು ನಾನು ನೋಡಬೇಕು. ಇದಕ್ಕಾಗಿ ಮತ ಭಿಕ್ಷೆ ಕೇಳುತ್ತಿದ್ದೇನೆ. ದಯವಿಟ್ಟು ಜೆಡಿಎಸ್‌ಗೆ ಮತ ಹಾಕಿ ಎಂದು ಮನವಿ ಮಾಡಿದ್ದರು.
PublicNext
19/10/2021 03:33 pm