ಪೆರಂಪಳ್ಳಿ: ಸಿದ್ದರಾಮಯ್ಯರನ್ನು ಸೋನಿಯಾ ಗಾಂಧಿ ರಾಷ್ಟ್ರ ರಾಜಕಾರಣಕ್ಕೆ ಬುಲಾವ್ ಮಾಡಿದ್ದಾರೆ ಎಂಬ ವಿಚಾರವಾಗಿ ಉಡುಪಿಯ ಪೆರಂಪಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್ ,ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಸದ್ಯ ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ. ಅಲ್ಲದೆ ಎಲ್ಲ ಉಪಚುನಾವಣೆಗಳನ್ನೂ ಸೋತಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಅಸ್ತಿತ್ವ ಇಲ್ಲ. ಆದ್ದರಿಂದ ಯಾವ ರಾಜಕಾರಣ ಮಾಡಬೇಕೆಂದು ಅವರು ತೀರ್ಮಾನಿಸಬೇಕು. ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ಯಾರೇ ನೇತೃತ್ವ ತೆಗೆದುಕೊಂಡರೂ ಅಡ್ಡಿ ಇಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎರಡೂ ಉಪ ಚುನಾವಣೆಯಲ್ಲೂ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ದತ್ತಪೀಠ ಅರ್ಚಕರ ನೇಮಕ ವಿಚಾರದಲ್ಲಿ ರಾಜ್ಯ ಸರಕಾರ ಹಿಂದೂಗಳ ಭಾವನೆ ಅರ್ಥ ಮಾಡಿಕೊಂಡು ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದ ಸಚಿವರು, ದತ್ತಪೀಠ ವಿಚಾರದಲ್ಲಿ ನಮ್ಮ ನಿಲುವು ಬಹಳ ಸ್ಪಷ್ಟವಿದೆ. ದಶಕಗಳ ಹೋರಾಟದ ಫಲ ನ್ಯಾಯ ಸಿಕ್ಕಿದ್ದು, ನ್ಯಾಯಾಲಯದ ತೀರ್ಪು ಅಭ್ಯಾಸ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕಾನೂನು ,ಕಂದಾಯ, ಮುಜರಾಯಿ ಸಚಿವರನ್ನು ಒಳಗೊಂಡ ಸಮಿತಿ ರಚನೆ ಮಾಡಿ ಈ ನಿಟ್ಟಿನಲ್ಲಿ ಶೀಘ್ರ ಸುತ್ತೋಲೆ ಹೊರಡಿಸುತ್ತೇವೆ. ದತ್ತಪೀಠ ವಿಚಾರದಲ್ಲಿ ವಿಳಂಬ ಮಾಡುವ ಯಾವುದೇ ಉದ್ದೇಶ ನಮಗಿಲ್ಲ. ದತ್ತಪೀಠದ ಕುರಿತು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ನವರಾತ್ರಿ ಆಚರಣೆ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುನಿಲ್, ಭಕ್ತಿ ಪ್ರಧಾನ ಆಚರಣೆಗೆ ಸರಕಾರ ಅವಕಾಶ ಕೊಡುತ್ತದೆ. ಕೇಂದ್ರ ,ರಾಜ್ಯ ಸರಕಾರದ ಸುತ್ತೋಲೆ ಪರಿಶೀಲಿಸುತ್ತೇವೆ. ನವರಾತ್ರಿ ಉತ್ಸವವನ್ನು ಚೆನ್ನಾಗಿ ಮಾಡಲು ಅವಕಾಶ ನೀಡುತ್ತೇವೆ. ಮೈಸೂರಿನಲ್ಲಿ ಜಂಬೂಸವಾರಿಗೆ 500 ಮಂದಿ ನಿಗದಿಪಡಿಸಿದ್ದು, ಇತಿಮಿತಿ ಅರ್ಥ ಮಾಡಿಕೊಂಡು ಉಳಿದ ಕಡೆಗಳಲ್ಲಿ ಆಚರಣೆ ಮಾಡಲಾಗುವುದು ಎಂದರು.
PublicNext
06/10/2021 01:21 pm