ಹಾಸನ : ನೀವು ಕಡಿಮೆ ಹಣ ಕೊಟ್ಟು ಹೆಚ್ಚು ಹಣ ಕೊಟ್ಟಿದ್ದೀರಿ ಎಂದು ಸುಳ್ಳು ಹೇಳುತ್ತಿದ್ದೀರಾ..? ಎಂದು ಶಾಸಕ ಶಿವಲಿಂಗೇಗೌಡ ಅವರಿಗೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ರಾಂಪುರದಲ್ಲಿ ನಿನ್ನೆ ನಡೆದಿದ್ದ ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಶಾಸಕ ಶಿವಲಿಂಗೇಗೌಡ ಕಾಮಗಾರಿಗಳಿಗೆ ಹನ್ನೊಂದು ಲಕ್ಷ ಕೊಡಿಸಿರುವುದಾಗಿ ಹೇಳುತ್ತಿದ್ದಂತೆ ಜನ ಇಲ್ಲ ಅಷ್ಟು ಹಣ ಕೊಟ್ಟಿಲ್ಲ, ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪೇಚೆಗೆ ಸಿಲುಕಿದ ಶಾಸಕ ಲೆಕ್ಕ ಹಾಕಿ ಇಲ್ಲಾ ಇಲ್ಲಾ 11 ಅಲ್ಲ ಒಟ್ಟು 8 ಲಕ್ಷ ಹಣ ಕೊಡಿಸಿರುವುದಾಗಿ ಹೇಳಿದ್ದಾರೆ. ಮೊದಲು 11 ಲಕ್ಷ ಕೊಡಿಸಿದ್ದೇನೆ ಅಂದ್ರಿ, ಈಗ ಎಂಟು ಲಕ್ಷ ಅನ್ನುತ್ತಿದ್ದೀರಾ ಎಂದು ಗ್ರಾಮದ ಕೆಲವರ ಮರುಪ್ರಶ್ನೆ ಮಾಡುತ್ತಿದ್ದಂತೆ ಇರಿಸು ಮುರಿಸು ಮಾಡಿಕೊಂಡ ಶಾಸಕರು 11 ಅಂದೆ ಆದರೆ ಮೂರು ಕಡಿಮೆಯಿದೆ, ಆದರೆ ನಾವು ಕೊಟ್ಟಿದ್ದೇವೆ. ಇನ್ನೂ ಬೇಕು ಅಂದ್ರೆ ಹೆಚ್ಚಿನ ಹಣ ಕೊಡಲು ಸೂಚಿಸಿದ್ದೇನೆ. ಮೂರು ಭಾರಿ ಎಂ.ಎಲ್.ಎ. ಮಾಡಿದ್ದೀರ ನಿಮ್ಮ ಋಣ ತೀರಿಸಬೇಕು ಎಂದು ಸಮಾಧಾನ ಮಾಡಲು ಮುಂದಾಗಿರುವ ಪ್ರಸಂಗ ನಡೆದಿದೆ.
ಈ ವೇಳೆ ಕಾಮಗಾರಿಗಳೆಲ್ಲ ಅಂತ್ಯಗೊಳ್ಳೋದು ಯಾವಾಗ, ಕಳಪೆ ಕಾಮಗಾರಿ ಆಗುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ದೇಶದ ಬಜೆಟ್ ಹಾಗೇನೆ ಕೆಲಸಗಳು ಬಂದಹಾಗೆ ಬಂದಹಾಗೆ ಮುಗಿಸಿಕೊಂಡು ಹೋಗಬೇಕು ಒಂದೇ ಸಲ ಮುಗಿಸೋಕೆ ದುಡ್ಡು ಎಲ್ಲಿಂದ ತರ್ತಾರೆ ನನ್ನ ಬಳಿ ಖಜಾನೆ ಇಲ್ಲ, ನಾನು ಎಲ್ಲಿಂದನಾದ್ರು ತರಬೇಕು, ಆನಂತರ ಕೆಲಸ ಮುಗಿಸಬೇಕು. ಕಳಪೆ ಕಾಮಗಾರಿ ಅಂದರೆ ಕಾಮಗಾರಿ ಮಾಡಕೆ ನಾನು ಬರ್ತಿನಾ,ಕಂಟ್ರಾಕ್ಟರ್ ನಂಬರ್ ಕೊಡ್ತಿನಿ. ಮುಲಾಜಿಲ್ಲದೆ ಅವರನ್ನು ಹಿಡ್ಕಳಿ. ಕಾನೂನಿನ ಪ್ರಕಾರ ಕೆಲಸ ಮಾಡಿ ಅಂಥಾ ಹೇಳಿ ಅವರೇನು ಪುಕ್ಸಟೆ ಕೆಲ್ಸಾ ಮಾಡಲ್ಲ ಎಂದು ಉತ್ತರ ನೀಡಿದರು.
PublicNext
05/10/2021 05:00 pm