ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನ ಉತ್ತರ ಪ್ರದೇಶದ ಪೊಲೀಸರು ಹರಗಾಂವ್ನಲ್ಲಿ ಬಂಧಿಸಿದ್ದಾರೆ ಎಂದು ಪಕ್ಷದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ದೂರಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿಗಾಗಿ ರೈತರು ಭಾನುವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿತ್ತು. ಲಖಿಂಪುರ್ನಲ್ಲಿ ನಡೆದ ಹಿಂಸಾಚಾರವನ್ನು ಪ್ರಿಯಾಂಕ ಗಾಂಧಿ ಖಂಡಿಸಿದ್ದಾರೆ. ಅಲ್ಲದೇ ಇಂದು ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಲಿದ್ದರು.
ಹಿಂಸಚಾರ ಹಿನ್ನೆಲೆಯಲ್ಲಿ ಪ್ರಿಯಾಂಕಗಾಂಧಿ ಭೇಟಿಗೆ ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದ್ದರು. ಮಾತ್ರವಲ್ಲ, ಅವರನ್ನ ಗೃಹ ಬಂಧನದಲ್ಲಿ ಇರುವಂತೆ ಸೂಚನೆ ನೀಡಿದ್ದರು. ಆದರೆ ಪ್ರಿಯಾಂಕ ಆದೇಶವನ್ನು ಧಿಕ್ಕರಿಸಿ ಭಾನುವಾರ ರಾತ್ರಿ ಲಕ್ನೋದಿಂದ ಲಖಿಂಪುರ್ ಖೇರಿಗೆ ತೆರಳಿದರು. ಉತ್ತರ ಪ್ರದೇಶ ಪೊಲೀಸರು ಇಂದು (ಸೋಮವಾರ) ಬೆಳಗಿನ ಜಾವ 5:30ರ ಸುಮಾರಿಗೆ ಹರಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಿಯಾಂಕರನ್ನು ಬಂಧಿಸಿದ್ದಾರೆ. ಅವರನ್ನು ಸೀತಾಪುರ ಜಿಲ್ಲೆಯ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
PublicNext
04/10/2021 08:55 am