ನವದೆಹಲಿ: ಇಟಲಿ ದೇಶದ ಸೋನಿಯಾಗಾಂಧಿ ಅವರ ಮೂಲ ಹೆಸರು ಆಂಟೋನಿಯಾ ಮೈನೋ ಎಂದು ಬಿಜೆಪಿ ಲೇವಡಿ ಮಾಡಿದ್ದಾಗ ಕಾಂಗ್ರೆಸ್ ಬಹಳ ಬೇಸರ ಹೊರಹಾಕಿತ್ತು. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿಯವರ ತಾಯಿಯನ್ನು ರಾಜಕೀಯದಲ್ಲಿ ಎಳೆದು ತಂದಿರುವ ಕಾಂಗ್ರೆಸ್ ವಕ್ತಾರ ಮುದಿತ್ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿದ್ದಾರೆ ಎಂಬುದೆಲ್ಲ ಸುಳ್ಳು. ಅವರು ತಾಯಿಯನ್ನೂ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಖಾಸಗಿ ವಾಹಿನಿಯ ನಿರೂಪಕ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪಂಜಾಬ್, ಛತ್ತೀಸ್ ಗಢ, ಉತ್ತರಾಖಂಡದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಯುವ ವೇಳೆ ಬಿಜೆಪಿ ವಕ್ತಾರ ‘ನಮ್ಮ ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಸ್ವಂತ ಪರಿಶ್ರಮದಿಂದ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. ಆದರೆ, ಸೋನಿಯಾ ಗಾಂಧಿ ಆಕೆಯ ಜೀವನದಲ್ಲಿ ಏನು ಸಾಧನೆ ಮಾಡಿದ್ದಾರೆ? ಕಾಂಗ್ರೆಸ್ ಪಕ್ಷಕ್ಕಾಗಿ ಆಕೆ ಏನು ಮಾಡಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಕೋಪಗೊಂಡ ಕಾಂಗ್ರೆಸ್ ವಕ್ತಾರ, ‘ಪ್ರಧಾನಿ ಮೋದಿಯವರದ್ದು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ಎಂದೂ ಚಹಾ ಮಾರಿರಲಿಲ್ಲ. ಅದೆಲ್ಲ ಸುಳ್ಳು ಕತೆ. ಅವರು ಯಾವ ರೀತಿಯ ವ್ಯಕ್ತಿಯೆಂದರೆ ಟಿವಿಗಾಗಿ ತಮ್ಮ ತಾಯಿಯನ್ನು ಕೂಡ ಮಾರಿದ್ದಾರೆ’ ಎಂದು ಹೇಳಿದ್ದಾರೆ.
ಅದಕ್ಕೆ ನಿರೂಪಕ ಆಕ್ಷೇಪ ವ್ಯಕ್ತಪಡಿಸಿದರೂ ಸುಮ್ಮನಾಗದ ಕಾಂಗ್ರೆಸ್ ವಕ್ತಾರ, ಪ್ರತಿ ಬಾರಿ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೋಡಲು ಹೋಗುವಾಗ ಅವರ ಜೊತೆ ಕ್ಯಾಮೆರಾಗಳು ಕೂಡ ಇರುತ್ತವೆ. ತಾಯಿಯನ್ನು ಭೇಟಿಯಾಗುವ ವಿಚಾರವನ್ನು ಕೂಡ ಟಿವಿಗಳಿಗೆ ಮೋದಿ ಮಾರಿಕೊಂಡಿದ್ದಾರೆ ಎಂದಿದ್ದಾರೆ.
ಅದಕ್ಕೆ ಮರುಪ್ರಶ್ನೆ ಹಾಕಿದ ನಿರೂಪಕ, ರಾಹುಲ್ ಗಾಂಧಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಹೋದಾಗಲೂ ಕ್ಯಾಮೆರಾಗಳು ಇರುತ್ತವಲ್ಲ ಎಂದಿದ್ದಾರೆ. ಆದರೂ ಸುಮ್ಮನಾಗದ ಕಾಂಗ್ರೆಸ್ ವಕ್ತಾರ ಮತ್ತೊಮ್ಮೆ ಮೋದಿ ತಮ್ಮ ತಾಯಿಯನ್ನು ಮಾರಿಕೊಂಡಿದ್ದಾರೆ ಎಂದಿದ್ದಾರೆ.
ಸದ್ಯ ಕಾಂಗ್ರೆಸ್ ವಕ್ತಾರನ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
PublicNext
01/10/2021 06:45 pm