ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಈಗ 'ಪ್ಯಾಂಟ್' ಮತ್ತು 'ಪಂಚೆ' ವಾರ್ ಶುರುವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಂಚೆ ಕಳಚಿತ್ತು. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದ್ದರು. ಈಗ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್, "ಪಂಚೆ ಕಳಚುವುದು ಸ್ವಾಭಾವಿಕ. ಆದ್ರೆ ಪ್ಯಾಂಟ್ ಬಿಚ್ಚುವುದು ಅಸಹ್ಯ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿದ್ದರಾಮಯ್ಯ ಅವರ ಪಂಚೆ ಆಕಸ್ಮಿಕವಾಗಿ ಕಳಚಿ ಬೀಳುವುದು ಸಹಜ. ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನ ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ. ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ 'ಪ್ಯಾಂಟ್ ಭಾಗ್ಯ' ನೀಡುವೆವು ಚಿಂತಿಸಬೇಡಿ" ಎಂದಿದೆ.
ಇದೇ ವಿಚಾರವಾಗಿ ಇನ್ನೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, "ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿ.ಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ" ಎಂದು ಏಟಿಗೆ ತಿರುಗೇಟು ನೀಡಿದೆ.
PublicNext
29/09/2021 11:27 am