ಬೆಂಗಳೂರು : ಸರಣಿ ಟ್ವೀಟ್ ಮಾಡುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ನವರು ತಮ್ಮನ್ನು ತಾವು ದೇಶಭಕ್ತರು ಅಂತ ಕರೆದುಕೊಳ್ತಾರೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಒಬ್ಬನೇ ಒಬ್ಬ ಆರ್ ಎಸ್ ಎಸ್ ನ ನಾಯಕನ ಹೆಸರನ್ನುಬಿಜೆಪಿ ನಾಯಕರು ಹೇಳಲಿ ನೋಡೋಣ. ಇಷ್ಟೇ ಅವರ ದೇಶಭಕ್ತಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಮಹಾತ್ಮ ಗಾಂಧಿ, ಬಿ.ಆರ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡರೆ ಬಿಜೆಪಿಯವರಿಗೆ ಮೊದಲು ಆಗ್ತಾ ಇರಲಿಲ್ಲ, ಅವರ ಭಾವಚಿತ್ರವನ್ನೂ ತಮ್ಮ ಕಚೇರಿಗಳಲ್ಲಿ ಹಾಕುತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಅವರನ್ನು ಪ್ರೀತಿಸುವ ಹಾಗೆ ನಾಟಕವಾಡಲು ಆರಂಭಿಸಿದ್ದಾರೆ'' .
''ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಎಲ್ಲಿಯವರೆಗೆ ಬಟ್ಟೆ ಮತ್ತು ಹೊಟ್ಟೆತುಂಬಾ ಅನ್ನ ಸಿಗುವುದಿಲ್ಲೋ ಅಲ್ಲಿಯವರೆಗೆ ನಾನು ಅರೆಬೆತ್ತಲಾಗಿಯೇ ಇರುತ್ತೇನೆ ಎಂದು ಗಾಂಧೀಜಿ ಅವರು ಹೇಳಿದ್ದರು. ನಾವು ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಅನ್ನು ಬಂದ್ ಮಾಡಿ ರಾಜ್ಯ ಬಿಜೆಪಿ ಸರ್ಕಾರ ಬಡವರು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದೆ'' ಕಿಡಿಕಾರಿದ್ದಾರೆ.
ಗಾಂಧೀಜಿಯವರನ್ನು ಗೌರವಿಸುವುದು ಎಂದರೆ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಲ್ಲ. ಅವರ ಚಿಂತನೆಗಳ ಪಾಲನೆ ಹಾಗೂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸುವುದು ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
''ಬಿಜೆಪಿಯವರು ಹಿಂಬಾಗಿಲ ಮೂಲಕ ಮಾತ್ರ ಅಧಿಕಾರಕ್ಕೆ ಬರಬಲ್ಲರು. ಅವರಿಗೆ ಸ್ವಂತ ಶಕ್ತಿ ಇಲ್ಲ. ಹಣ, ಅಧಿಕಾರದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ರೂ ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದ್ರು. ಇದಕ್ಕೇ ಹೇಳೋದು 'ಮಾಡಿದ್ದುಣ್ಣೋ ಮಹರಾಯ'' ಎಂದು ಲೇವಡಿ ಮಾಡಿದ್ದಾರೆ.
PublicNext
26/09/2021 10:21 pm