ಬೆಂಗಳೂರು: ನಂಜನಗೂಡು ತಾಲ್ಲೂಕಿನ ದೇವಸ್ಥಾನವೊಂದನ್ನು ಕೆಡವಿದ ಘಟನೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸರ್ಕಾರದ ನಿಯಮಕ್ಕೆ ಒಳಪಟ್ಟ ಎಲ್ಲ ಅನಧಿಕೃತ 'ಧಾರ್ಮಿಕ ಕಟ್ಟಡ'ಗಳನ್ನು ಉಳಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಸೋಮವಾರ ಮಸೂದೆಯನ್ನು ಮಂಡಿಸಿದೆ.
‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021' ಅನ್ನು ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು. ಇದರ ಸಾರಂಶ ಹೀಗಿದೆ: ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲಾಗುವುದು. ಆದರೆ ಭವಿಷ್ಯದಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವುದನ್ನು ಮಸೂದೆ ನಿರ್ಬಂಧಿಸಿದೆ.
ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ, ಸರ್ಕಾರದ ನಿಯಮಗಳಿಗೆ ಅನುಸಾರ ಧಾರ್ಮಿಕ ಕಟ್ಟಡಗಳಿದ್ದರೆ ಅವುಗಳನ್ನು ತೆರವುಗೊಳಿಸುವಂತಿಲ್ಲ. ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬಹುದು.
'ಧಾರ್ಮಿಕ ಕಟ್ಟಡ'ಗಳ ವ್ಯಾಪ್ತಿಗೆ ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಇತ್ಯಾದಿ ಸೇರಿವೆ. ಇದರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿ ಪಡೆಯದೇ ನಿರ್ಮಿಸಲಾಗಿದ್ದರೆ, ಅವುಗಳನ್ನು ಉಳಿಸಿಕೊಳ್ಳಲಾಗುವುದು. ಒಂದು ವೇಳೆ ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ಕ್ರಮ ಜರುಗಿಸಿದರೂ, ಅಂತಹ ಧಾರ್ಮಿಕ ಕಟ್ಟಡಗಳಿಗೆ 'ಒಳ್ಳೆಯ ನಂಬಿಕೆಯಿಂದ ತೆಗೆದುಕೊಂಡ ಕ್ರಮ' ಎಂಬ ಕಾರಣದಿಂದ ರಕ್ಷಣೆಯನ್ನು ನೀಡುವ ಅಂಶವನ್ನೂ ಮಸೂದೆ ಒಳಗೊಂಡಿದೆ. ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಕಾನೂನು ಜಾರಿಗೆ ಬರಲಿದೆ.
PublicNext
21/09/2021 07:37 am