ಬೆಂಗಳೂರು: ಇಂದು ಆರಂಭಗೊಂಡಿರುವ ವಿಧಾನ ಮಂಡಲ ಅಧಿವೇಶನ ನಾನಾ ಕಾರಣಕ್ಕೆ ಗಮನ ಸೆಳೆದಿದೆ. ಹತ್ತು ದಿನಗಳ ಕಾಲ ನಡೆಯುವ ಅಧಿವೇಶನಗೆ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಅಧಿವೇಶನಕ್ಕೆ ಗೈರಾದರು. ಇತ್ತ ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಭಾಗದ ಕೊನೆಯ ಸಾಲಿನಲ್ಲಿ ಕುಳಿತ ಪ್ರಸಂಗ ಕೂಡ ನಡೆಯಿತು.
ಹೌದು. ಈವರೆಗೂ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿನ ಇರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ನಾಲ್ಕನೆ ಸಾಲಿನ ಕುರ್ಚಿಯನ್ನು ಅಲಂಕರಿಸಿದ್ದರು. ಅವರೊಂದಿಗೆ ಮಾಜಿ ಸಚಿವರಾದ ಸುರೇಶ್ ಕುಮಾರ್ ಕೂಡ ಕುಳಿತಿದ್ದರು. ಎರಡನೇ ಸಾಲಿನಲ್ಲಿ ಕೂರುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದರಿಂದ ಆಡಳಿತ ಪಕ್ಷದ ಮೊದಲ ಸಾಲಿನ ಒಂದನೆ ಕುರ್ಚಿಯಲ್ಲಿ ಕುಳಿತಿದ್ದರು. ಮೂರನೇ ಸಾಲಿನಲ್ಲಿ ಇರುತ್ತಿದ್ದ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಮೊದಲ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದಾರೆ. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡನೇ ಸಾಲಿಗೆ ಹಿಂಬಡ್ತಿ ಪಡೆದಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಈ ಅಧಿವೇಶನದಲ್ಲಿ ಮೊದಲ ಸಾಲಿಗೆ ಬಂದಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಕೂಡ ಇದೇ ಸಾಲಿನಲ್ಲಿ ಕುಳಿತಿದ್ದರು. ಈಗ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಕೂಡ ಇದೇ ಸಾಲಿಗೆ ಬಂದದ್ದು ಅನಿರೀಕ್ಷಿತವೇನಲ್ಲ.
PublicNext
13/09/2021 05:52 pm