ರಾಮನಗರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ಮುಂದುವರಿದಿದ್ದು, ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ.
ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಸಂಬಂಧ ಅಶೋಕ್, ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದರು. ದೊಡ್ಡಬಳ್ಳಾಪುರದಲ್ಲಿ ಮೈತ್ರಿಗೆ ಹಸಿರು ನಿಶಾನೆ ತೋರಿರುವ ಎಚ್‌ಡಿಕೆ, ಕಲಬುರ್ಗಿ ವಿಚಾರದಲ್ಲಿ ದೇವೇಗೌಡರನ್ನು ಸಂಪರ್ಕಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಎನ್ನಲಾಗಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, "ಹಿರಿಯ ಸಚಿವ ಶ್ರೀ ಆರ್.ಅಶೋಕ್ ಅವರು ಇಂದು ನನ್ನ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ಸಮಾಲೋಚಿಸಿದರು" ಎಂದು ತಿಳಿಸಿದ್ದಾರೆ.
"ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ ನಮ್ಮ ಶಾಸಕರ ಜತೆ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಹೇಳಿದ್ದೇನೆ. ಪ್ರಸ್ತುತ ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ ಸಾ.ರಾ.ಮಹೇಶ್ ಅವರು ನನ್ನ ಜತೆ ಇದ್ದರು" ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
PublicNext
11/09/2021 08:02 pm