ಬೆಳಗಾವಿ: "ನಾನು ಕಾಂಗ್ರೆಸ್‌ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್ ಕೊಟ್ಟಿದ್ದು ನಿಜ" ಎಂದು ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಗವಾಡ ತಾಲ್ಲೂಕಿನ ಐನಾಪೂರದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, 'ಕಾಂಗ್ರೆಸ್ ಬಿಟ್ಟ ಬರಲು ಎಷ್ಟು ಹಣ ಬೇಕೆಂದು ಬಿಜೆಪಿಯವರು ಕೇಳಿದ್ದರು. ಆದರೆ ನಾನು, ಒಂದು ಪೈಸೆಯನ್ನೂ ಪಡೆಯುವುದಿಲ್ಲ, ಸರ್ಕಾರ ಬಂದ ನಂತರ ಒಳ್ಳೆಯ ಸ್ಥಾನಮಾನ ಕೊಡಿ ಚೆನ್ನಾಗಿ ನಿರ್ವಹಿಸಿ ಜನಸೇವೆ ಮಾಡುತ್ತೇನೆ ಎಂದು ಹೇಳಿದ್ದೆ. ಹಣ ಪಡೆಯದೆ ಬಿಜೆಪಿ ಸೇರಿದ್ದೇನೆ. ಯಾವ ಕಾರಣದಿಂದ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಕೊಟ್ಟಿಲ್ಲವೋ ಗೊತ್ತಿಲ್ಲ. ಮುಂದಿನ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದಾಗ ಖಂಡಿತವಾಗಿಯೂ ಕೊಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
"ನಾನು 20 ವರ್ಷ ಒಕ್ಕಲುತನ ಮಾಡಿದ್ದೇನೆ. ಕೃಷಿ ಖಾತೆ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತಿದ್ದೆ. ಆದರೆ ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ನೀಡಿದ್ದರು. ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ಶೀಘ್ರದಲ್ಲೇ ನಿಮಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕೃಷಿ ಖಾತೆ ಕೊಟ್ಟರೆ ಚೆನ್ನಾಗಿ ನಿರ್ವಹಿಸುತ್ತೇನೆ. ಜನರಿಗೆ ಅನುಕೂಲ ಮಾಡಿಕೊಡುತ್ತೇನೆ" ಎಂದು ಶ್ರೀಮಂತ ಪಾಟೀಲ ತಿಳಿಸಿದರು.
PublicNext
11/09/2021 06:44 pm