ದಾವಣಗೆರೆ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಸೆಪ್ಟಂಬರ್ 18 ಮತ್ತು 19 ರಂದು ನಡೆಯಲಿದೆ. ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮೊದಲ ಕಾರ್ಯಕಾರಿಣಿ ಇದಾಗಿದ್ದು, ಪಕ್ಷ ಸಂಘಟನೆ, ಆಂತರಿಕ ವಿಚಾರ, ಸಚಿವ ಸಂಪುಟದಲ್ಲಿ ಉಳಿದಿರುವ ಸ್ಥಾನ ಯಾರಿಗೆ ನೀಡಬೇಕು. ಪಕ್ಷ ವಿರೋಧಿ ಹೇಳಿಕೆ ನೀಡುವುದೂ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚೆಯಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಿಣಿ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 18ರಂದು ಅಪೂರ್ವ ರೆಸಾರ್ಟ್ ನ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಅಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಂದು ನಡೆಯುವ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತ ಚರ್ಚೆಯಾಗಲಿದೆ. ಪಕ್ಷದ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸುವ ಕೆಲಸ ಆಗುತ್ತದೆ.
ಇನ್ನು ಸೆಪ್ಟಂಬರ್ 19ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಗರದ ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದ್ದು, ಈ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಇದು ಬೊಮ್ಮಾಯಿ ಅವರು ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದರು, ಶಾಸಕರು, ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ, ಎಲ್ಲಿ ಬಿಜೆಪಿಗೆ ನೆಲೆ ಇಲ್ಲವೋ ಅಲ್ಲೆಲ್ಲಾ ನಮ್ಮ ಶಕ್ತಿವರ್ಧನೆ ಆಗುತ್ತಿದೆ. ಬಿಜೆಪಿ ಮತ್ತಷ್ಟು ವಿಕಾಸ, ದೃಢಗೊಳಿಸಲು ಮೈಲಿಗಲ್ಲು ಆಗಲಿದೆ. ಎಲ್ಲಾ ತಯಾರಿ ಮಾಡುತ್ತಿದ್ದೇವೆ. ಪಕ್ಷ ಸಂಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
PublicNext
08/09/2021 01:18 pm