ದಾವಣಗೆರೆ: ಮುಂಬರುವ ಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಘೋಷಣೆಗೆ ನಾವು ಬದ್ಧ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಸಿಎಂ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾಲದಲ್ಲಿ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಅಮಿತ್ ಶಾ ಅವರು ಸಹ ಯಡಿಯೂರಪ್ಪ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಮಾತಾಡಿದ್ದಾರೆ. ನಾಯಕತ್ವದ ವಿಚಾರದ ಬಗ್ಗೆ ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಯಡಿಯೂರಪ್ಪ ಅಥವಾ ಜಗದೀಶ್ ಶೆಟ್ಟರ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
ಗಣೇಶ ಹಬ್ಬಕ್ಕೆ ಕೆಲ ನಿರ್ಬಂಧಗಳನ್ನು ಹಾಕಿ ಪರವಾನಗಿ ನೀಡಬಹುದು. ಈ ಬಗ್ಗೆ ಇಂದು ಸಿಎಂ ಮಹತ್ವದ ಸಭೆ ನಡೆಸಲಿದ್ದು ಸಭೆಯ ನಂತರ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಭೈರತಿ ಬಸವರಾಜ್, ಯಡಿಯೂರಪ್ಪ ಅವರನ್ನು ಜಗದೀಶ್ ಶೆಟ್ಟರ್ ಭೇಟಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಭಿವೃದ್ಧಿ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
PublicNext
05/09/2021 12:04 pm