ದಾವಣಗೆರೆ: ಹೆಣ್ಣುಮಕ್ಕಳ ಮಾನ, ಪ್ರಾಣ ಎರಡಕ್ಕೂ ಆದ್ಯತೆ ನೀಡಲಾಗುವುದು. ಏಳೂವರೆಗೆ ಅಲ್ಲಿಗೆ ಯಾಕೆ ಹೋಗ್ತೀಯಾ ಅಂತಾ ಸಹೋದರರು, ಪೋಷಕರು ಕೇಳುವುದು ಸಾಮಾನ್ಯ. ನಮ್ಮ ಮನೆಯಲ್ಲಿಯಾದರೂ ನಾವು ಕೇಳ್ತೇವೆ ಅಲ್ವಾ. ಅದೇ ರೀತಿಯಲ್ಲಿ ಹೇಳಿದ್ದೇ ಅಷ್ಟೇ. ವಿರೋಧ ಪಕ್ಷದವರಿಗೆ ಆರೋಪ ಮಾಡಲು ಬೇರೆ ವಿಚಾರ ಇಲ್ಲ. ಈ ಕಾರಣಕ್ಕೆ ವಿನಾಕಾರಣ ಆರೋಪ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಕೊಟ್ಟ ಹೇಳಿಕೆಯನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಯಿತು. ವಿದ್ಯಾರ್ಥಿನಿ ಅಲ್ಲಿಗೆ ಆ ಸಮಯದಲ್ಲಿ ಹೋಗಬೇಕಿತ್ತಾ ಎಂಬ ಹೇಳಿಕೆಗೆ ಪ್ರತಿಕ್ರಿಯೆ ಬೇರೆಯದ್ದೇ ರೀತಿಯಲ್ಲಿ ವ್ಯಕ್ತವಾಯ್ತು. ನಾನು ಏನಾದರೂ ಹೇಳಿದರೆ ಇನ್ನೊಂದು ಅರ್ಥ ಕಲ್ಪಿಸಲಾಗುತ್ತದೆ. ಹಾಗಾಗಿ, ಈ ವಿಚಾರದಲ್ಲಿ ಹೆಚ್ಚು ಮಾತನಾಡಲಾರೆ ಎಂದರು.
ಈಗಾಗಲೇ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೇಟೆ ನಡೆಸುತ್ತಿದ್ದಾರೆ. ಟನ್ ಗಟ್ಟಲೇ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಲೇಜು, ಪಿಯುಸಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಮಾದಕ ವಸ್ತು ಸೇವನೆ ಹಾಗೂ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
PublicNext
02/09/2021 01:49 pm