ಬೆಂಗಳೂರು: ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ 'ಡಬಲ್ ಇಂಜಿನ್' ಸರ್ಕಾರದ ದೊಡ್ಡ ಸಾಧನೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಡಬಲ್ ಇಂಜಿನ್ ಸರಕಾರ ಒಂದು ರೀತಿ ಸ್ಮಶಾನದ ಹೆಣವಿದ್ದಂತೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ದೇಶದ ಜನ ಮೋದಿಯವರು ಹೇಳುತ್ತಿದ್ದ 'ಅಚ್ಛೇದಿನ್' ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ಬಿಜೆಪಿಗೆ ಅಧಿಕಾರ ನೀಡಿದ್ದರು. ಈಗ ಅದೇ ಜನ ಕೇಂದ್ರ ಸರಕಾರದ ತೆರಿಗೆ ದರೋಡೆ ಕಂಡು, ಅಚ್ಛೇದಿನ್ ಎಂದರೆ ಕನಸಿನಲ್ಲೂ ಬೆಚ್ಚುವಂತಾಗಿದೆ. ಮೋದಿಯವರಿಗೆ ಅಧಿಕಾರ ಕೊಟ್ಟು, ಹರುಷದ ಕೂಳಿಗಾಗಿ, ವರುಷದ ಕೂಳು ಕಳೆದುಕೊಂಡಂತಾಗಿದೆ ದೇಶದ ಜನರ ಪರಿಸ್ಥಿತಿ' ಎಂದು ಲೇವಡಿ ಮಾಡಿದ್ದಾರೆ.
'ಕೇಂದ್ರ ಸರಕಾರ ಕಾರ್ಪೊರೇಟ್ ತೆರಿಗೆಗಳನ್ನು ಇಳಿಸಿ, ಆ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿದೆ. ಕಾರ್ಪೊರೇಟ್ ಮಿತ್ರ-ಜನಸಾಮಾನ್ಯನ ಶತ್ರುವಾಗಿರುವ ಈ ಕೇಂದ್ರ ಸರಕಾರ ದೇಶದ ಪಾಲಿಗೆ ಹೆಗಲೇರಿದ ಶನಿಯಂತೆ. ಜನರನ್ನು ತೆರಿಗೆ ಮೂಲಕ ಹುರಿದು ಮುಕ್ಕುತ್ತಿರುವ ಮೋದಿ ಸರಕಾರಕ್ಕೆ ಜನರ ಹಿತಕ್ಕಿಂತ ಕಾರ್ಪೊರೇಟ್ ಕುಳಗಳ ಹಿತವೇ ಮುಖ್ಯವಾಗಿದೆ' ಎಂದು ಕುಟುಕಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, 'ಬೆಲೆಯೇರಿಕೆ ದೇಶದ ಜನರಿಗೆ ಮೋದಿ ಸರಕಾರ ಕೊಟ್ಟ ಶಾಪ. ಎರಡು ವರ್ಷದ ಅವಧಿಯಲ್ಲಿ ಕೆಲ ಅಗತ್ಯ ವಸ್ತುಗಳ ಬೆಲೆ ಶೇ.200ರಷ್ಟು ಏರಿಕೆಯಾಗಿದೆ. ಆದರೆ, ಜನರ ಆದಾಯ ಮೊದಲಿಗಿಂತ ಕಡಿಮೆಯಾಗಿದೆ. ಮೋದಿಯವರ ದುಬಾರಿ ದುನಿಯಾದಲ್ಲಿ ಅವರ ಕಾರ್ಪೊರೇಟ್ ಸ್ನೇಹಿತರು ಮಾತ್ರ ಬದುಕಬಹುದು. ಆದರೆ, ಜನಸಾಮಾನ್ಯನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ' ಎಂದು ಕಿಡಿಕಾರಿದ್ದಾರೆ.
PublicNext
01/09/2021 11:15 pm