ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ಪಂಜರದ ಗಿಣಿ ಎಂಬ ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಶಾಸಕ ಅಮೃತ ದೇಸಾಯಿ ಅವರ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟೀಲ್, ಕಾಂಗ್ರೆಸ್‌ನಲ್ಲಿ ಇರುವವರೆಲ್ಲ ಪಂಜರದ ಗಿಣಿಗಳೇ. ಎಲ್ಲ ನಾಯಕರನ್ನೂ ಕಾಯಲಿಕ್ಕೆ ಇಬ್ಬರು ಕಾವಲುಗಾರರಿದ್ದಾರೆ. ಒಬ್ಬರು ಸಿದ್ದರಾಮಯ್ಯ, ಇನ್ನೊಬ್ಬರು ಡಿಕೆಶಿ. ಒಂದಷ್ಟು ಪಂಜರದ ಗಿಣಿಗಳನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಒಂದಷ್ಟು ಪಂಜರದ ಗಿಣಿಗಳನ್ನು ಡಿಕೆಶಿ ಇಟ್ಟುಕೊಂಡಿದ್ದಾರೆ. ಮೊದಲು ಇವರೆಲ್ಲ ಅದರಿಂದ ಹೊರಗೆ ಬರಲಿ ಎಂದು ಕುಹಕವಾಡಿದರು. ಬೊಮ್ಮಾಯಿ ಸಿಎಂ ಆದ ಬಳಿಕ ಎಲ್ಲ ತೀರ್ಮಾನಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಯಡಿಯೂರಪ್ಪ ಕಾಲದ ಯೋಜನೆಗಳಿಗೆ ವೇಗ ಕೊಟ್ಟು ಅನುಷ್ಠಾನ ಮಾಡುತ್ತಿದ್ದಾರೆ. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಚಿಂತನೆ ಮುಂದುವರೆಸಿಕೊಂಡು ಹೊರಟಿದ್ದಾರೆ ಎಂದರು.
ಕಾಂಗ್ರೆಸ್ ನಶಿಸಿ, ಗತ ಇತಿಹಾಸ ಸೇರುವ ಪಕ್ಷ ಆಗುತ್ತದೆ. ಬಿಜೆಪಿಗರು ಧರ್ಮ ಪ್ರಚಾರಕರು ಮಾತ್ರ ಎಂಬ ರಾಯರೆಡ್ಡಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಸಿದ್ದರಾಮಯ್ಯರ ಕಾಲದಲ್ಲಿ ಭ್ರಷ್ಟಾಚಾರ, ಧರ್ಮ ವಿರೋಧಿ ನೀತಿ ಇತ್ತು. ಅದರಿಂದ ಬಿಜೆಪಿಗೆ ಆಡಳಿತ ಸಿಕ್ಕಿದೆ. ತಪ್ಪಾಗಿ ಬಿಜೆಪಿಗೆ ಅಧಿಕಾರ ಸಿಕ್ಕಿದ್ದಲ್ಲ. ರಾಯರೆಡ್ಡಿ, ಡಿಕೆಶಿ ತಮ್ಮ ಮುಖ ಉಳಿಸಿಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಒಳ ಜಗಳ ಬೀದಿಗೆ ಬಿದ್ದಿದೆ ಎಂದರು.
ಡಿಕೆಶಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಆಯ್ತು, ಇನ್ನೂ ರಾಜ್ಯ ಪದಾಧಿಕಾರಿಗಳ ಆಯ್ಕೆ ಆಗಿಲ್ಲ. ಯಾವ ವಿಭಾಗಕ್ಕೆ ಯಾರು ಅಧ್ಯಕ್ಷರು ಅನ್ನೋದೇ ಗೊಂದಲ ಇದೆ. ಯುವ ಕಾಂಗ್ರೆಸ್‌ಗೂ ಇಬ್ಬರ ಹೆಸರಿದೆ. ಇಬ್ಬರಿಗೆ ಮೂರು ತಿಂಗಳು ಅಧಿಕಾರ ಅಂತೆ. ಡಿಕೆಶಿ ನಲಪಾಡ್ ಅಂತಾರೆ, ಸಿದ್ದರಾಮಯ್ಯ ರಕ್ಷಾ ರಾಮಯ್ಯ ಅಂತಾರೆ. ಕಾಂಗ್ರೆಸ್‌ಗೆ ಪಕ್ಷದೊಳಗೆ ಆಡಳಿತ ನಡೆಸಲು ಆಗುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷರಿಲ್ಲ. ಕಾಂಗ್ರೆಸ್ ನಶಿಸಿ, ಗತ ಇತಿಹಾಸ ಸೇರುವ ಪಕ್ಷ ಆಗುತ್ತದೆ. ಕೇವಲ ಪತ್ರಿಕಾಗೋಷ್ಠಿಗಳ ಮೂಲಕ ಪಕ್ಷ ಇದೆ ಎಂದು ಹರಿಹಾಯ್ದರು .
PublicNext
31/08/2021 07:33 pm