ಬೆಂಗಳೂರು: "ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ ಬಿಜೆಪಿ ಮುಖಂಡ ಸಿ.ಟಿ.ರವಿ ಹೋರಾಟದಿಂದ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಹೌದು. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನ ಚಿಕ್ಕಮಗಳೂರು ಶಾಸಕ ಸಿಟಿ ರವಿ, "ಭಾರತಕ್ಕೆ ಮಹಾತ್ಮಾ ಗಾಂಧಿ ಅವರ ಅಹಿಂಸಾತ್ಮಕ ಹೋರಾಟದ ಮೂಲಕ ಸ್ವಾತಂತ್ರ್ಯ ಲಭ್ಯವಾಗಿತ್ತು ಎಂಬುದು ಅರ್ಧ ಸತ್ಯವಷ್ಟೇ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ನಾಯಕರ ಕೊಡುಗೆ ಹೆಚ್ಚಾಗಿದೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಿಟಿ ರವಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಭಾನುವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, "ಹೌದು. ಸಿ.ಟಿ. ರವಿ ಅವರಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಇನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ನಾಯಕರ ಕೊಡುಗೆ ಅಪಾರ" ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂಬ ಸಿಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, "ನಾವು ಈಗಲೇ ನಿಮ್ಹಾನ್ಸ್ ಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ" ಎಂದು ಟಾಂಗ್ ಕೊಟ್ಟರು.
PublicNext
22/08/2021 10:45 pm