ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಸತಿ ಸಚಿವ ವಿ. ಸೋಮಣ್ಣ, ಸಿದ್ದರಾಮಯ್ಯ ಸಿಎಂ ಆಗಿದ್ದವರು. ಐದು ವರ್ಷ ಆಡಳಿತ ನಡೆಸಿದವರು. ಎಲ್ಲಾ ವಿಚಾರವೂ ಅವರಿಗೆ ಗೊತ್ತಿದೆ. ಎಲ್ಲೋ ಕುಳಿತು ಏನೋ ಮಾತನಾಡಿದರೆ ಆಗದು. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಟೇಕಾಫ್ ಆಗಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜಿಂದಾಲ್ ನ ಪ್ರಕೃತಿ ಚಿಕಿತ್ಸಾಲಯಕ್ಕ ಚಿಕಿತ್ಸೆಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿಗೆ ಹೋಗಿ ಬಂದ ಬಳಿಕ ಆದರೂ ಸರಿಯಾಗಿ ಮಾತನಾಡಲಿ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ಇನ್ನು ಕೊರೊನಾ, ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇಂಥ ವೇಳೆಯಲ್ಲಿ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಬಿ. ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಉತ್ತಮ ಆಡಳಿತ ನೀಡಿದ್ದರು. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿದ್ದರು. ಬೊಮ್ಮಾಯಿ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಕೆಲ್ಸ ನಾವು ಮಾಡ್ತೇವೆ. ಉಳಿದದ್ದು ಜನರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಮೀಸಲಾತಿ ವಿಚಾರ ಅತ್ಯಂತ ಸೂಕ್ಷ್ಮವಾದ ವಿಚಾರ. ಶೇಕಡಾ 50ಕ್ಕಿಂತ ಹೆಚ್ಚಿನ ಮೀಸಲಾತಿ ಮೀರಬಾರದು ಎಂದು ಕೋರ್ಟ್ ಹೇಳಿದೆ. ತಜ್ಞರು, ಪರಿಣಿತರು, ಬುದ್ಧಿಜೀವಿಗಳ ಜೊತೆ ಸಿಎಂ ಬೊಮ್ಮಾಯಿ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬರುವ ಜನಾದೇಶಕ್ಕೆ ನಾವು ಬದ್ಧರಿದ್ದೇವೆ. ಎಲ್ಲೋ ಕುಳಿತು ಏನೇನೋ ಮಾತನಾಡುವುದು ಸರಿಯಲ್ಲ. ಯಾರು ಬರುತ್ತಾರೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ನನ್ನ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಕೇಳಿದರೆ ನಾನು ಕೊಡುತ್ತೇನೆ. ಚರ್ಚೆ ನಡೆಸಲು ಸಿದ್ಧನಿದ್ದೇನೆ. ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದವರು. ಅವರಿಗೆ ಎಲ್ಲಾ ವಿಚಾರ ತಿಳಿದಿದೆ. ಸರ್ಕಾರ ನಿಂತ ನೀರಲ್ಲ. ಹರಿಯುವ ನೀರು ಇದ್ದಂತೆ. ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
PublicNext
21/08/2021 01:09 pm