ಚಿತ್ರದುರ್ಗ: ಸದಾಶಿವ ವರದಿ ಜಾರಿಗೊಳಿಸುವ ವಿಚಾರದಲ್ಲಿ ಸಾಮಾಜಿಕ ಮತ್ತು ಯುವ ಸಬಲೀಕರಣ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ಚಿತ್ರದುರ್ಗ ಬೋವಿ ಮಠದ ಸಿದ್ದರಾಮೇಶ್ವರ ಶ್ರೀಗಳ ನಡುವೆ ಮಾತಿನ ವಾಕ್ಸಮರ ನಡೆದಿದೆ.
ಸದಾಶಿವ ಆಯೋಗದಲ್ಲಿ ಲಂಬಾಣಿ, ಭೋವಿ ಸಮಾಜಗಳನ್ನು ಮೀಸಲಾತಿಯಿಂದ ಕೈಬಿಡಬೇಕು ಎಂದು ಯಾವುದೇ ಪದ ಇಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಸಚಿವರು ಮುರುಘಾ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೀಸಲಾತಿಯಿಂದ ಕೈಬಿಡುತ್ತಾರೆ ಎಂಬ ಚರ್ಚೆಗಳು ಅಲ್ಲಲ್ಲಿ ನಡೆಯುತ್ತಿವೆ. ಈ ವಿಚಾರ ನಿನ್ನೆ ನನ್ನ ಗಮನಕ್ಕೆ ಬಂದಿದೆ ಎಂದರು. ನಾನು ಆ ಸಮಾಜಗಳನ್ನು ವಿರೋಧ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ, ನಾನ್ಯಾಕೆ ವಿರೋಧ ಮಾಡಲಿ, ನಾನೇನು ನ್ಯಾಯಾಧೀಶರೇ ? ಎಂದು ಪ್ರಶ್ನಿಸಿದರು.ನಾನೇ ಸ್ವತಃ ಭೋವಿ ಸಮಾಜ ಹಾಗೂ ಲಂಬಾಣಿ ಸಮಾಜದ ಶಾಸಕರ ಜೊತೆ ಚರ್ಚಿಸಿದ್ದೇನೆ ಎಂದರು. ಎಲ್ಲರೂ ಒಂದಾಗೋಣ ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಆರ್ಥಿಕ, ಸಾಮಾಜಿಕವಾಗಿ ಒಳ್ಳೆಯದನ್ನು ಮಾಡಬೇಕು ಎಂದುಕೊಂಡಿದ್ದೇವೆ. ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿಗಳು ದಿಕ್ಕು ತಪ್ಪಿಸಬಾರದು, ಶ್ರೀಗಳ ಮೇಲೆ ನನಗೆ ಗೌರವವಿದೆ. ಯಾಕೆ ಗೊಂದಲ ಸೃಷ್ಠಿ ಮಾಡುತ್ತೀರಾ ಎಂದು ನಾರಾಯಣಸ್ವಾಮಿ ಸ್ವಾಮೀಜಿ ಅವರನ್ನು ಪ್ರಶ್ನಿಸಿದರು.
ಇನ್ನು ಸಚಿವರ ಹೇಳಿಕೆಗೂ ಮೊದಲು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಸದಾಶಿವ ವರದಿ ವಿಚಾರವಾಗಿ ಚರ್ಚಿಸೋಣ ಅಂತ ಹೇಳಿದ್ದಾರೆ. ಆದರೆ ನಮ್ಮೊಂದಿಗೆ ಯಾರು ಬಂದು ಚರ್ಚಿಸಿಲ್ಲ. ವರದಿ ವಿಷಯವಾಗಿ ತಾರ್ಕಿಕ ಅಂತ್ಯ ಕಾಣುವ ಯಾವುದೇ ಚರ್ಚೆಯಾಗಿಲ್ಲ ಎಂದು ಶ್ರೀಗಳು ತಿಳಿಸಿದರು.ಎರಡು ಸಮುದಾಯಗಳ ನಡುವೆ ಈ ವಿಚಾರವಾಗಿ ಹೆಚ್ಚು ರಾಜಕೀಯ ನಡೆಯಬಾರದು.ಯಾವ ರಾಜಕೀಯ ಪಕ್ಷಕ್ಕೂ ಇದು ಆಹಾರವಾಗಬಾರದು ಎಂದರು.
ಸದಾಶಿವ ಆಯೋಗ ವರದಿ ತಾರ್ಕಿಕ ಅಂತ್ಯವಾಗಲು 101 ಸಮುದಾಯಗಳು ಕುಳಿತು ಚರ್ಚಿಸಲು ಸಲಹೆ ನೀಡಿದ್ದೆವು ಈ ವಿಚಾರವಾಗಿ ಇದುವರಿಗೆ ಯಾವುದೇ ಬೈಠೆಕ್ ಆಗಿಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು. ಸೋರಿಕೆಯಾಗಿರುವ ವರದಿಯಲ್ಲಿ ಬೋವಿ ಮತ್ತು ಲಂಬಾಣಿ ಸಮುದಾಯವನ್ನು ಕೈ ಬಿಡುತ್ತಾರೆ ಎಂಬುದು ನಮಗೆ ಆತಂಕ ಇದೆ ಎಂದರು. ಒಂದೇ ವೇದಿಕೆಯಲ್ಲಿ ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಲು ವೇದಿಕೆ ಸಿದ್ಧಪಡಿಸಿ ಎಂದು ಕೇಂದ್ರ ಸಚಿವರಿಗೆ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು
PublicNext
20/08/2021 10:10 pm