ಧಾರವಾಡ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಶಾಸಕ ಅರವಿಂದ ಬೆಲ್ಲದ ಕೂಡ ಸಮರ್ಥಿಸಿಕೊಂಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಇಂದಿರಾ ಕ್ಯಾಂಟೀನ್ ಎಂದು ಕಾಂಗ್ರೆಸ್‌ನವರು ಹೆಸರಿಟ್ಟಿದ್ದಾರೆ. ದೆಹಲಿಗೂ ಹೋದರೆ ಇವೇ ಹೆಸರುಗಳಿವೆ. ಸರ್ಕಾರದ ಹಣದಿಂದ ಯೋಜನೆಗಳನ್ನು ನಾವು ಮಾಡುತ್ತೇವೆ. ಇಂದಿರಾ ಗಾಂಧಿ, ನೆಹರೂ, ರಾಜೀವ್ ಗಾಂಧಿ ಎಂಬ ಹೆಸರಿನಲ್ಲಿ ದೇಶದ ತುಂಬೆಲ್ಲ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಹಜವಾಗಿ ಸಿ.ಟಿ.ರವಿ ಅದರ ಬಗ್ಗೆ ಗಮನಸೆಳೆದಿದ್ದಾರೆ. ಈ ಹಿಂದೆ ಮಾಯಾವತಿ ಪಾರ್ಕ್‌ನಲ್ಲಿ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ದೇಶದಾದ್ಯಂತ ಹೋರಾಟವೇ ನಡೆಯಿತು. ಇಡೀ ದೇಶದಾದ್ಯಂತ ಗಾಂಧಿ ಕುಟುಂಬದ ಹೆಸರಿನಲ್ಲೇ ಯೋಜನೆಗಳಿವೆ. ಪಾರ್ಕ್, ರಸ್ತೆ, ರೈಲ್ವೆ ನಿಲ್ದಾಣಗಳು, ಕ್ರೀಡಾಂಗಣಗಳು, ಸರ್ಕಾರದ ಯೋಜನೆಗಳು, ಆಸ್ಪತ್ರೆಗಳು ಎಲ್ಲವೂ ಅವರ ಹೆಸರಿನಲ್ಲೇ ಇವೆ. ಆದರೆ, ಮಾಯಾವತಿ ದೊಡ್ಡ ತಪ್ಪು ಮಾಡಿದವರಂತೆ ಅವರ ವಿರುದ್ಧ ಹೋರಾಟ ಮಾಡಿದರು. ಹೀಗಾಗಿ ಕಾಂಗ್ರೆಸ್ ತನ್ನ ದ್ವಂದ್ವ ನೀತಿ ಕೈಬಿಡಬೇಕು. ಸರ್ಕಾರದ ಯೋಜನೆಗಳಿಗೆ ಇವರು ಒಂದೆರಡು ಹೆಸರಿಟ್ಟರೆ ಅಡ್ಡಿ ಇಲ್ಲ. ಎಲ್ಲದಕ್ಕೂ ಅವರದ್ದೇ ಹೆಸರಿಡುತ್ತ ಹೋದರೆ ತಪ್ಪು ಎಂದರು.
PublicNext
14/08/2021 08:07 pm