ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೌದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ತಮ್ಮ ಪ್ರೌಢ ಪ್ರಬಂಧ (ಪಿಎಚ್ ಡಿ) ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸೋಮವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನ್ನ ಪಿಎಚ್ ಡಿ ಪ್ರಬಂಧದ ಭಾಗವಾಗಿ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರೊಂದಿಗೆ ನವದೆಹಲಿಯಲ್ಲಿ ಚರ್ಚೆ ನಡೆಸಿದೆ. 88 ವರ್ಷ ವಯಸ್ಸಿನ ಅವರಲ್ಲಿರುವ ಉತ್ಸಾಹ ಪ್ರಶಂಸನೀಯ. ಭಾರತೀಯ ರಾಜಕೀಯದ ಬಗ್ಗೆ ಅವರ ಜ್ಞಾನ ಮತ್ತು ಅನುಭವ ಅದ್ಭುತವಾದದ್ದು. ನಿಮ್ಮ ಜ್ಞಾನವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಗೌಡರೇ,’ ಎಂದು ಅವರು ಬರೆದುಕೊಂಡಿದ್ದಾರೆ.
‘ಭಾರತೀಯ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರಗಳು’ ಎಂಬುದು ಸಿ.ಟಿ ರವಿ ಅವರ ಪಿಎಚ್ ಡಿ ವಿಷಯ. ಇದಕ್ಕಾಗಿ ಮಾತುಕತೆ ನಡೆಸಲು ಸಿ.ಟಿ ರವಿ ಅವರು ದೇವೇಗೌಡರನ್ನು ಭೇಟಿಯಾಗಿದ್ದರು.
PublicNext
10/08/2021 07:23 pm