ದಾವಣಗೆರೆ: ಜಿಲ್ಲೆಗೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದಿದ್ದೆ. ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಂಟು ದಿನಗಳಾಗಿವೆ.ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ನಮಗೆಲ್ಲಾ ಜವಾಬ್ದಾರಿ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ, ಏನೆಲ್ಲಾ ತೊಂದರೆಯಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಕೇಳಿದ್ದಾರೆ. ಈ ಆದೇಶದ ಮೇರೆಗೆ ಬಂದಿದ್ದೇನೆ. ಖಾತೆಗಳ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟದ್ದು. ಜವಾಬ್ದಾರಿ ಕೊಟ್ಟಿದ್ದು, ನಿರ್ವಹಣೆ ಮಾಡಲು ಬಂದಿದ್ದೇನೆ. ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಚರ್ಚೆಯಾಗಿಲ್ಲ ಎಂದು ನೂತನ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಖಾತೆ ಕೊಡಿ, ಇಂತ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಸಿಎಂ ಬಳಿ ಬೇಡಿಕೆ ಇಟ್ಟಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. 125 ರಿಂದ 130 ಶಾಸಕರಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗದು. ಎಲ್ಲರೂ ನಮ್ಮವರೇ. ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.
ಜಮೀರ್ ಅಹ್ಮದ್ ಮತ್ತು ರೋಷನ್ ಬೇಗ್ ಮನೆಗಳ ಮೇಲಿನ ಇಡಿ ದಾಳಿ ಬಗ್ಗೆ ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದಾರೋ ಅವರ ಮನೆ ಮೇಲೆ ದಾಳಿ ಆಗುತ್ತೆ. ಇದಕ್ಕಾಗಿ ಅಧಿಕಾರಿಗಳ ತಂಡ ಇರುತ್ತೆ. ತನಿಖೆ ಮಾಡುತ್ತದೆ. ಬಿಜೆಪಿಯವರು ಇದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ದೂರು ನೀಡಲಿ. ಕ್ರಮ ಕೈಗೊಳ್ಳಲು ಹೇಳಲಿ ಎಂದು ತಿರುಗೇಟು ನೀಡಿದರು.
PublicNext
06/08/2021 01:29 pm