ಬೆಂಗಳೂರು: 'ನೂತನ ಸಚಿವರಿಗೆ ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುವುದು. ಈ ಹಿಂದಿನ ಖಾತೆಯಲ್ಲೇ ಮುಂದುವರಿಸಿ ಅಥವಾ ಇಂಥದ್ದೇ ಖಾತೆ ಕೊಡಿ ಎಂದು ಯಾರೂ ಕೇಳಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಬೊಮ್ಮಾಯಿ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಹಂಚಿಕೆ ಬಗ್ಗೆ ನಿರ್ಧಾರ ಆಗಲಿದೆ. ಖಾತೆ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನ ಮಾಡುವುದಿಲ್ಲ. ಅದನ್ನು ನಾನೇ ನಿರ್ಧಾರ ಮಾಡುತ್ತೇನೆ. ಇದುವರೆಗೂ ಯಾವುದೇ ಖಾತೆ ಬೇಕು ಎಂದು ಸಚಿವರು ಕೇಳಿಲ್ಲ. ಅದೇ ಖಾತೆಯನ್ನು ಮುಂದುವರೆಸಿ ಎಂದು ಕೂಡ ಯಾರು ಕೇಳಿಲ್ಲ. ನೀವು ಯಾವುದೇ ನಿರ್ಧಾರ ಮಾಡಿದ್ದರೂ ಅದಕ್ಕೆ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.
'ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಾರ್ಯಪಡೆಯನ್ನು ಪುನರ್‌ರಚನೆ ಮಾಡಲಾಗುವುದು. ಪ್ರವಾಹದಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ತೆರಳುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ’ ಎಂದರು.
PublicNext
04/08/2021 06:54 pm