ದಾವಣಗೆರೆ: ನಾನು ಮೂರು ವರ್ಷದಲ್ಲಿ ನಾಲ್ಕು ಪ್ರಬಲ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿದ್ದೆ. ಅನುಭವ ಇದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಕೊಟ್ಟಲ್ಲ. ಒಂದು ವೇಳೆ ನನ್ನ ಕೆಲಸ ಗಮನಿಸಿ ನೀಡಿದ್ರೆ ನಿಭಾಯಿಸ್ತೇನೆ. ಮುಖ್ಯಮಂತ್ರಿಗಳು ಏನು ತೀರ್ಮಾನ ಮಾಡ್ತಾರೋ ಕಾದು ನೋಡೋಣ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರು, ಸಿಎಂ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ಸಂಜೆಯೊಳಗೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟಕ್ಕೆ ಯಾರು ಸೇರಬೇಕೆಂಬ ಬಗ್ಗೆ ನಿರ್ಧಾರ ಆಗುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಯಾರಿಗೆ ಅದೃಷ್ಟ ಸಿಗುತ್ತೋ ಕಾದು ನೋಡೊಣ. ಸಂಜೆ ಬೆಂಗಳೂರಿಗೆ ಹೋಗುತ್ತೇನೆ. ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಗೊತ್ತಿಲ್ಲ. ನಾನು ಸದಾ ಹಸನ್ಮುಖಿ. ಏನು ಬೇಕಾದರೂ ಆಗಲಿ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಸಚಿವ ಸ್ಥಾನ ನೀಡಲೇಬೇಕು. ನಾನು ಕೊರೊನಾ ವೇಳೆ ಕೆಲಸ ಮಾಡಿದ್ದನ್ನು ಕೇಂದ್ರದ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅರುಣ್ ಸಿಂಗ್ ಅವರೂ ಹೊಗಳಿಕೆ ಮಾತನಾಡಿದ್ದಾರೆ. ಚರ್ಚೆ ಮಾಡಿ ಯಾವ ನಿರ್ಧಾರ ಮಾಡ್ತಾರೋ ಕಾದು ನೋಡೋಣ. ಅವರ ನಿರ್ಧಾರಕ್ಕೆ ಬದ್ಧ. ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದು ಸಿಎಂ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆಯಲ್ಲಿ ಇಂಥವರನ್ನೇ ಕೈಬಿಡಿ ಎಂದು ಯಡಿಯೂರಪ್ಪ ಹೇಳಿಲ್ಲ. ಇಂತ ಕೀಳು ಮಟ್ಟದ ರಾಜಕೀಯ ಮಾಡಲ್ಲ. ಈ ಆರೋಪ ಶುದ್ಧ ಸುಳ್ಳು ಎಂದು ಹೇಳಿದರು.
PublicNext
02/08/2021 03:53 pm