ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಅಷ್ಟೇ ಅಲ್ಲದೆ ಕಾಂಗ್ರೆಸ್, ಜೆಡಿಎಸ್ ನಾಯಕರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, "ರಾಜ್ಯದ ಆಡಳಿತ ಭ್ರಷ್ಟಾಚಾರದಿಂದ ಹೊಲಸೆದ್ದಿರುವ, ದುರಾಡಾಳಿತದಿಂದ ದಿಕ್ಕುತಪ್ಪಿರುವ ಮತ್ತು ಆಂತರಿಕ ಕಚ್ಚಾಟದಿಂದ ನಲುಗಿಹೋಗಿರುವ ಸಂದರ್ಭದಲ್ಲಿ ಸ್ನೇಹಿತ ಬಸವರಾಜ ಸೋಮಪ್ಪ ಬೊಮ್ಮಾಯಿ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಯಶಸ್ಸನ್ನು ಕೋರುತ್ತೇನೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸಹಕಾರದ ಭರವಸೆ ನೀಡುತ್ತೇನೆ" ಎಂದು ತಿಳಿಸಿದ್ದಾರೆ.
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕೋರಿದ್ದಾರೆ. "ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ಪರಿಹಾರಾತ್ಮಕವಾಗಿ ಕೆಲಸ ಮಾಡುವಿರೆಂದು ನಿರೀಕ್ಷಿಸುವೆ. ನೀರಾವರಿ ವಿಚಾರಗಳಲ್ಲಿ ತಮಗೆ ಜ್ಞಾನವುಂಟು. ಅಣೆಕಟ್ಟು ನಿರ್ಮಾಣದಂಥ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳತ್ತ ತಾವು ಗಮನಹರಿಸುವಿರೆಂದು ಭಾವಿಸುವೆ" ಎಂದು ಟ್ವೀಟ್ ಮಾಡಿದ್ದಾರೆ.
PublicNext
28/07/2021 03:15 pm