ದಾವಣಗೆರೆ: "ಸೀಮೆಗಿಲ್ಲದ ಮಂತ್ರಿನಾ ಅಂತಾ ನಾನೇ ಹೇಳಿದ್ದೇನೆ'' ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪರ ಪುತ್ರ ಮಲ್ಲಿಕಾರ್ಜುನ್ ಕಿಚಾಯಿಸಿದ ಘಟನೆ ನಡೆದಿದೆ.
ದಾವಣಗೆರೆಯ ಎಸ್ ಎಸ್ ಮಾಲ್ ನಲ್ಲಿ ಶಾಮನೂರು ಮೊಮ್ಮಗ ಹಾಗೂ ಬಕ್ಕೇಶ್ ಪುತ್ರನ ಮದುವೆಯಲ್ಲಿ ಭಾಗಿಯಾದ ವೇಳೆ ಈ ಹಾಸ್ಯಪ್ರಸಂಗ ನಡೆಯಿತು.
ಬೊಮ್ಮಾಯಿ ಅವರತ್ರ ಕೆಲ್ಸ ಇತ್ತು. ಮಾತನಾಡ್ಲಿಕ್ಕೆ ಕಾಲ್ ಮಾಡಿದ್ದೆ. ಆಗ ಪಿಎ ಅಂತೆ, ಪಿ. ಹೆಚ್ ಅಂತೆ ಅಂದ್ರು. ಆಗ ನಾನೇ ಸೀಮೆಗಿಲ್ಲದ ಮಂತ್ರಿನಾ, ಬಿಡು ಆಯ್ತು ಎಂದ ಮೇಲೆ ಸರಿಯಾಯ್ತು. ನಾನು ಹೇಳಿದ ಕೆಲ್ಸ ನೀವು ಇನ್ನು ಮಾಡಿಲ್ಲ. ಹೀಗೆ ಮಾಡಿದ್ರೆ ಹೆಂಗೆ ಎಂದು ಬೊಮ್ಮಾಯಿಗೆ ಎಸ್ ಎಸ್ ಎಂ ಪ್ರಶ್ನೆ ಮಾಡಿದರು. ಆಗ ಮಧ್ಯಪ್ರವೇಶಿಸಿದ ಬಸವರಾಜ್ ಹೊರಟ್ಟಿ ನಾನು ಹಂಗೇ ಮಾಡಿದ್ದೀನಾ ಎಂಬ ಮರುಪ್ರಶ್ನೆ ಹಾಕಿದರು. ಮಾತ್ರವಲ್ಲ, ತಮಾಷೆಗೆ ಮಲ್ಲಿಕಾರ್ಜುನ ಕೆನ್ನೆಗೆ ಹೊಡೆದು ನಗೆ ಬೀರಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಒಂದೆಡೆ ಸಮಾಗಮ ಆದರು. ರಾಜಕೀಯ ಬದ್ಧ ವೈರಿ ಪಕ್ಷಗಳ ನಾಯಕರು ಕುಶಲೋಪರಿ ನಡೆಸಿ ಹರಟಿದರು. ಮಲ್ಲಿಕಾರ್ಜುನ್, ಬೊಮ್ಮಾಯಿ, ಬಸವರಾಜ್ ಹೊರಟ್ಟಿ, ಆಂಜನೇಯ ತಮಾಷೆ ಮಾಡುತ್ತಾ ಮಾತನಾಡಿದ ದೃಶ್ಯ ಕಂಡು ಬಂತು. ಸುಮಾರು ಹತ್ತು ನಿಮಿಷಕ್ಕಿಂತ ಹೆಚ್ಚು ಖುಷಿಖುಷಿಯಾಗಿ ಹರಟಿದರಲ್ಲದೇ, ರಾಜಕೀಯ ಜಂಜಾಟ ಮರೆತರು.
PublicNext
26/02/2021 03:26 pm