ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ಸಿನ "ನಾಮಕರಣ " ಸಂಪ್ರದಾಯ ಬಿಜೆಪಿ ಅನಾವರಗೊಳಿಸುತ್ತಿರುವುದೇಕೆ?

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ವಿಶ್ವದ ಅತಿದೊಡ್ಡ ಕ್ರೀಡಾಂಗಣ ಹೆಗ್ಗಳಿಕೆಗೆ ಪಾತ್ರವಾದ ಗುಜರಾತದ ಮೊಟೇರಾ ಸ್ಟೇಡಿಯಂಗೆ ಈಗ ನಾಮಕಾರಣ ವಿವಾದ ಸುತ್ತಿಕೊಂಡಿದೆ. ಲೋಹ ಪುರುಷ ಸರ್ದಾರ್ ವಲ್ಲಭಾಯಿ ಪಟೇಲ್ ಹೆಸರನ್ನು ಬದಲಿಸಿ ಮೋದಿ ಹೆಸರನ್ನಿಟ್ಟಿರುವುದು.

ಏಕತೆ ಪ್ರತೀಕವಾಗಿ ನಿಂತ ಸರ್ದಾರ್ ಪಟೇಲ್ ಪುತ್ಥಳಿಗಿಂತಲೂ ಈ ಕ್ರೀಡಾಂಗಣ ಹೆಚ್ಚು ಪ್ರಚಾರ ಪಡೆಯಿತು. ಏಕೆಂದರೆ ಇದರೊಂದಿಗೆ ಮೋದಿ ಹೆಸರು ಸೇರಿಕೊಂಡಿರುವುದು. ನಿಜಕ್ಕೂ ಇದು ತಪ್ಪು. ಈ ಹಿಂದೆ ಇದ್ದ ಗುಜರಾತ್ ಸ್ಟೇಡಿಯಂ, 1982 ರಲ್ಲಿ ಸರ್ದಾರ್ ಪಟೇಲ್ ಎಂದು ಮರುನಾಮಕರಣಗೊಂಡಿತ್ತು. ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಹೆಸರನ್ನು ಮುಂದುವರಿಸಲಾಗಿದೆ ಆದರೆ ನೂತನವಾಗಿ ನಿರ್ಮಿಸಿದ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರನ್ನಿಡಲಾಗಿದೆ ಎಂದು ಸರಕಾರ ಸ್ಪಷ್ಟೀಕರಣ ನೀಡಿ ಕೈ ತೊಳೆದುಕೊಂಡಿದೆ.

ಕ್ರೀಡಾಂಗಣ ಅಥವಾ ಪ್ರಮುಖ ಸರಕಾರಿ ಸಂಸ್ಥೆಗಳಿಗೆ ರಾಜಕೀಯ ನಾಯಕರ ಹೆಸರನ್ನಿಡುವ ಚಾಳಿ ಬೆಳೆದು ಬಂದಿದ್ದು ಕಾಂಗ್ರೆಸ್ ಆಡಳಿತವಿರುವಾಗಿನಿಂದ. ದೇಶದ ಪ್ರಮುಖ ಕ್ರೀಡಾಂಗಣ, ಏರ್ ಪೋರ್ಟ್ ಸೇರಿದಂತೆ 27 ಪ್ರಮುಖ ಸರಕಾರಿ ಸಂಸ್ಥೆಗಳಿಗೆ ನೆಹರು, ಇಂದಿರಾ ರಾಜೀವಗಾಂಧಿ ಹೆಸರನ್ನಿಡಲಾಗಿದೆ. 2007 ರಲ್ಲಿ ಅರುಣಾಚಾಲಕ್ಕೆ ಸೋನಿಯಾ ಗಾಂಧಿ ಭೇಟಿ ನೀಡಿದಾಗ ಅಲ್ಲಿಯ ಅರುಣಾಚಲ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಿ ರಾಜೀವಗಾಂಧಿ ಹೆಸರನ್ನಟ್ಟಿರು.

ನೆಹರು,ಗಾಂಧಿ ಪರಿವಾರದ ನಾಮಕರಣ, ಮರುನಾಮಕರಣ ಸಂಪ್ರದಾಯವನ್ನು ಟೀಕಿಸುತ್ತಲೇ ಬಂದಿದ್ದ ಬಿಜೆಪಿ ಈಗ ಅದನ್ನೇ ಅಪ್ಪಿಕೊಳ್ಳಲು ಹೊರಟಿರುವುದು ಸರ್ವಥಾ ತಪ್ಪು. ಕೇಂದ್ರ ಸರಕಾರ ಏನೇ ಸಮರ್ಥನೆ ಮಾಡಿಕೊಂಡಿರಬಹುದು. ಆದರೆ ಮೋದಿ ನಾಮಕರಣದಿಂದ ಸರ್ದಾರ ಪಟೇಲ್ ಹೆಸರು ಮಾಯವಾಗಿ ಮೋದಿ ಹೆಸರು ಮಾತ್ರ ಉಳಿಯುವುದು ಖಚಿತ. ಇದು ಒಂದು ರೀತಿಯಲ್ಲಿ ಸರ್ದಾರ್ ಪಟೇಲರಿಗೆ ಮಾಡುವ ಅವಮಾನ ಎಂದೇ ಹೇಳಬೇಕು.

ಯಾವುದೇ ಕ್ರೀಡಾಂಗಣವಿರಲಿ, ಉನ್ನತ ಸಂಸ್ಥೆಗಳಿರಲಿ, ವಿಶ್ವವಿದ್ಯಾಲಯಗಳಿರಲಿ ಆಯಾ ಕ್ಷೇತ್ರದಲ್ಲಿಯ ಸಾಧಕರ ಹೆಸರನ್ನಿಟ್ಟರೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವುದಿಲ್ಲವೆ? ಏಳು ದಶಕ ದೇಶವನ್ನಾಳಿದ ಕಾಂಗ್ರೆಸ್ ಅಧಿಕಾರ ಬಲದಿಂದ ಎಲ್ಲಡೆ ಪರಿವಾರದ ಹೆಸರನ್ನಿಡುತ್ತ ಬಂತು. ಅದೇ ಹಾದಿಯನ್ನು ಬಿಜೆಪಿ ತುಳಿಯುತ್ತಿದೆ ಅಂದರೆ ಅದು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು? ನಾವು ಕಾಂಗ್ರೆಸ್ಸಿಗಿಂತ ಭಿನ್ನವಾಗಿಲ್ಲ ಎಂದೇ?

ಮರುನಾಮಕರಣ ಖಂಡಿತ ವಿವಾದ ಸೃಷ್ಟಿಸಲಿದೆ ಎಂದು ಅರಿತಿದ್ದರೂ, ಪ್ರಧಾನಿ ಮೋದಿ ಸಹ ಮೌನವಾಗಿರುವುದು ಆಶ್ಚರ್ಯ. ಇನ್ನಾದರೂ ರಾಜಕೀಯ ನಾಯಕರ ನಾಮಕರಣ ತಿಲಾಂಜಲಿ ನೀಡಿ, ಸಾಧಕರನ್ನು ಸ್ಮರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲೇ ಬೇಕು. ಆ ಹೊಸ ಸಂಪ್ರದಾಯವನ್ನು ಮೋದಿ ಅವರಿಂದ ನಿರೀಕ್ಷಿಸೋಣವೆ?

Edited By :
PublicNext

PublicNext

26/02/2021 09:06 am

Cinque Terre

100.77 K

Cinque Terre

29

ಸಂಬಂಧಿತ ಸುದ್ದಿ