ನವದೆಹಲಿ: ಅತ್ಯಂತ ನಿರ್ಣಾಯಕವಾದ ಅಣು, ಇಂಧನ, ಬಾಹ್ಯಾಕಾಶ ಮತ್ತು ರಕ್ಷಣೆಗೆ ಸಂಬಂಧಿಸಿದ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಇನ್ನೆಲ್ಲ ಕ್ಷೇತ್ರಗಳ ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು, ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವಾ ಕ್ಷೇತ್ರದ ಉದ್ಯಮಗಳಲ್ಲಿ ಸರ್ಕಾರವು ಕನಿಷ್ಠ ಮಟ್ಟದ ಪಾಲನ್ನು ಮಾತ್ರ ಉಳಿಸಿಕೊಳ್ಳಲಿದೆ ಎಂದು ಎಂದು ಮೋದಿ ಪ್ರತಿಪಾದಿಸಿದ್ದಾರೆ. 2021–22ನೇ ಸಾಲಿನ ಬಜೆಟ್ ನಲ್ಲಿ ಖಾಸಗೀಕರಣದ ಧೋರಣೆ ಕುರಿತ ವೆಬಿನಾರ್ ನಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗೀಕರಣವನ್ನು ಮತ್ತೊಮ್ಮೆ ಅತ್ಯಂತ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರವು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಯಾವ ಅಗತ್ಯವೂ ಇಲ್ಲ. ನಷ್ಟದಲ್ಲಿರುವ ಘಟಕಗಳನ್ನು ತೆರಿಗೆದಾರರ ಹಣದಲ್ಲಿ ಸಾಕಬೇಕಾಗಿಲ್ಲ. ಈ ಹಣವನ್ನು ಜನರ ಅಭಿವೃದ್ಧಿಗೆ ಬಳಸಬಹುದು ಎಂದು ಮೋದಿ ಹೇಳಿದ್ದಾರೆ. ರಕ್ಷಣೆ ಮತ್ತು ಇತರ ಮಹತ್ವದ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲದ ಉದ್ಯಮಗಳನ್ನು ಉದ್ದೇಶಿಸಿ ಅವರು ಹೀಗೆ ಹೇಳಿದ್ದಾರೆ.
‘ತೈಲ, ಅನಿಲ ಮತ್ತು ವಿದ್ಯುತ್ ಕ್ಷೇತ್ರದ ಸುಮಾರು ನೂರು ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗಿಯವರಿಗೆ ತೆರೆದಿಡಲಾಗುವುದು. ಇದರಿಂದ ₹2.5 ಲಕ್ಷ ಕೋಟಿ ಹೂಡಿಕೆಯ ಅವಕಾಶ ಖಾಸಗಿ ರಂಗಕ್ಕೆ ದೊರೆಯಲಿದೆ. ಉದ್ಯಮ ಮತ್ತು ವ್ಯಾಪಾರವನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರವೇ ಉದ್ಯಮಗಳ ಮಾಲೀಕತ್ವ ಹೊಂದಿವ ಅಗತ್ಯ ಇಲ್ಲ’ ಹೂಡಿಕೆ, ಜಾಗತಿಕ ಅತ್ಯುತ್ತಮ ಪದ್ಧತಿಗಳು, ಅತ್ಯುನ್ನತ ಗುಣಮಟ್ಟದ ವ್ಯವಸ್ಥಾಪಕರನ್ನು ಖಾಸಗಿ ಕ್ಷೇತ್ರವು ತರುತ್ತದೆ. ನಿರ್ವಹಣೆ ಮತ್ತು ಆಧುನಿಕತೆಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಸರ್ಕಾರದ ಪಾಲು ಮಾರಾಟದ ಮೂಲಕ ಸಿಕ್ಕ ಹಣವನ್ನು ನೀರು ಮತ್ತು ನೈರ್ಮಲ್ಯ, ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕ್ಷೇತ್ರಗಳಿಗೆ ವೆಚ್ಚ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
PublicNext
25/02/2021 07:45 am