ದಾವಣಗೆರೆ: ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಕಮಲ ಪಡೆ ಯಶಸ್ವಿ ಆಗಿದೆ. ಕಾಂಗ್ರೆಸ್ ನಿಂದ ಮೇಯರ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ದೇವರಮನೆ ಶಿವಕುಮಾರ್ ಚುನಾವಣೆಗೆ ಕೆಲ ಗಂಟೆ ಬಾಕಿ ಇರುವಾಗ ದಿಢೀರನೇ ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವ ಮೂಲಕ ಇಲ್ಲೂ "ಆಪರೇಷನ್ ಕಮಲ'' ನಡೆಯಿತಾ ಎಂಬ ಚರ್ಚೆ ಹುಟ್ಟು ಹಾಕಿದೆ. ಇನ್ನು ಹಿಂದುತ್ವದ ಹೋರಾಟಗಳಿಂದಲೇ ಜನರ ಮನ ಗೆದ್ದಿದ್ದ ನಾಯಕನೀಗ ಬೆಣ್ಣೆನಗರಿ ಪಾಲಿಕೆಯ ಮೇಯರ್.
ಕಾಂಗ್ರೆಸ್‌ಗಿಂತ ಕಡಿಮೆ ಕಾರ್ಪೊರೇಟರ್‌ಗಳನ್ನು ಹೊಂದಿದ್ದರೂ ಬಿಜೆಪಿ ಚಾಣಕ್ಯ ನಡೆಯ ಪರಿಣಾಮ ಸ್ಥಳೀಯ ಆಡಳಿತ ಕೈವಶವಾಗಿದೆ. ಪಾಲಿಕೆ ಅಧಿಕಾರಕ್ಕಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಸದಸ್ಯನೇ ಕೊನೆ ಕ್ಷಣದಲ್ಲಿ ದಿಢೀರ್ ಬಿಜೆಪಿ ಸೇರಿದ್ದು ಅಚ್ಚರಿಗೂ ಕಾರಣವಾಯಿತು. ಹೀಗಾಗಿ, ಇಂದು ಬಿಜೆಪಿಗೆ ಸಿಹಿ, ಕಾಂಗ್ರೆಸ್ ಕಹಿ ಅನುಭವವಾಗಿದೆ.
ಮಹಾನಗರ ಪಾಲಿಕೆಯ ಒಟ್ಟು ಸ್ಥಾನ 45. ,ಪಾಲಿಕೆ ಚುನಾವಣೆಯಲ್ಲಿ 22 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್ ಹಾಗೂ 5 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಇದರಲ್ಲಿ ಕಾಂಗ್ರೆಸ್‌ನ ಒಬ್ಬ ಕಾರ್ಪೋರೇಟರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸಂಖ್ಯೆ 21ಕ್ಕೆ ಕುಸಿದಿತ್ತು. ಆದ್ರೂ, ಬಿಜೆಪಿಗಿಂತ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಂಗ್ರೆಸ್ ಗೆ ಪಾಲಿಕೆ ಅಧಿಕಾರ ಗದ್ದುಗೆ ಹಿಡಿಯುವುದು ಅಷ್ಟೇನು ಕಷ್ಟವಾಗಿರಲಿಲ್ಲ. ಆದರೆ, ಬಿಜೆಪಿ ಮುಖಂಡರ ಚಾಣಾಕ್ಷತನ ಹಾಗೂ ಕಾರ್ಯಚಟುವಟಿಕೆ ಇಂದು ಪಾಲಿಕೆಯಲ್ಲಿ ಬಿಜೆಪಿ ಅರಳುವಂತೆ ಮಾಡಿದೆ. ಸಾಮಾನ್ಯ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಿಜೆಪಿಯ ಎಸ್. ಟಿ ವೀರೇಶ್ ಮೇಯರ್ ಆಗಿ ಅವಿರೋಧ ಆಯ್ಕೆಯಾದರೆ, ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ಎಂಪಿ, ಎಂಎಲ್‌ಎ, ಎಂಎಲ್ಸಿಗಳು ಸಹ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಮತದಾನ ಮಾಡಲು ಅರ್ಹರು ಎಂಬುದನ್ನೇ ಬಳಸಿಕೊಂಡ ಬಿಜೆಪಿ ತನ್ನ ಮತದಾರರನ್ನು ಹೆಚ್ಚಳ ಮಾಡಿಕೊಂಡಿತು. ಆದರೆ, ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡಿ ಹೈಕೋರ್ಟ್ ಗೆ ಹೋದರೂ ಅವರ ರಿಟ್ ಅರ್ಜಿ ವಜಾ ಆಗಿದ್ದು, ಅವರಿಗೆ ಹಿನ್ನಡೆಯಾಯಿತು. ಅಲ್ಲದೇ, ಮೇಯರ್ ಆಯ್ಕೆ ಚುನಾವಣೆ ಹಿಂದಿನ ದಿನವೇ ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ತನ್ನ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಿದರಿಂದ ಮೇಯರ್ ಪಟ್ಟದ ಆಸೆ ಕೈಬಿಟ್ಟಿತು.
ಮೇಯರ್ ಆಯ್ಕೆ ಚುನಾವಣೆಗೆ ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು ಹಾಜರಾಗಿದ್ದರು. ಆದರೆ, ಉತ್ಸಾಹ ಕಳೆದುಕೊಂಡಿದ್ದ ಕಾಂಗ್ರೆಸ್ ನ ಎಮ್ ಎಲ್ ಸಿ ಮೋಹನ್ ಕೊಂಡಜ್ಜಿ ಹೊರತುಪಡಿಸಿ ಬೇರೆ ಯಾರೂ ಹಾಜರಾಗಲಿಲ್ಲ. ಇದು ಬಿಜೆಪಿ ಪಾಲಿಗೆ ವರವಾಗುವ ಮೂಲಕ ಕಾಂಗ್ರೆಸ್ ನಿರಾಸೆ ಅನುಭವಿಸುವಂತಾಯಿತು. ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡಿದ್ದು, ಅಸಾಂವಿಧಾನಿಕ ಚುನಾವಣೆ ನಡೆಸಲಾಗಿದೆ ಎಂದು ದೂರುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ನಲ್ಲಿ ಸಕ್ತಿಯರಾಗಿದ್ದ ವೀರೇಶ್ ಹೋರಾಟದ ಹಿನ್ನೆಲೆ ಹೊಂದಿದವರಾಗಿದ್ದು, ಇದು ಪ್ರಾಮಾಣಿಕ, ಅಪ್ರತಿಮ ಹೋರಾಟಗಾರನಿಗೆ ಸಿಕ್ಕ ಜಯ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು.
PublicNext
24/02/2021 08:54 pm