ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಾಳೆ ಚುನಾವಣೆ. ಕಳೆದ ಒಂದು ವರ್ಷ ಅಧಿಕಾರ ನಡೆಸಿರುವ ಬಿಜೆಪಿಗೆ ಶಾಕ್ ಕೊಟ್ಟು " ಕೈ'' ಗದ್ದುಗೆ ಏರುವ ತೆರೆಮರೆಯ ಪ್ರಯತ್ನ ಮಾಡುತ್ತಿದ್ದು, ಗದ್ದುಗೆ ಬಿಟ್ಟುಕೊಡದಿರಲು ಬಿಜೆಪಿಯೂ ಪ್ರತಿತಂತ್ರ ಹೆಣೆದಿದೆ. ಗದ್ದುಗೆ ಗುದ್ದಾಟ ಶುರುವಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳು "ಅಧಿಕಾರ'' ಹಿಡಿಯುವ ರಣತಂತ್ರ ರೂಪಿಸಿದ್ದು, ಜಿದ್ದಾಜಿದ್ದಿಗೆ ಪಾಲಿಕೆಯಲ್ಲಿ ವೇದಿಕೆ ಸಿದ್ಧಗೊಂಡಿದೆ.
ಪಾಲಿಕೆಯ ಸದಸ್ಯರು, ಲೋಕಸಭಾ ಸದಸ್ಯ, ಶಾಸಕರು, ವಿಧಾನಪರಿಷತ್ ಸೇರಿದಂತೆ ಒಟ್ಟು 58 ಮತದಾರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಈ ಬಾರಿಯೂ ಪಕ್ಷೇತರ ಸದಸ್ಯರೇ ಕಿಂಗ್ ಮೇಕರ್.
ಕಾಂಗ್ರೆಸ್ ನ 21, ಬಿಜೆಪಿಯ 17, ಜೆಡಿಎಸ್ ಒಂದು ಹಾಗೂ ಐವರು ಪಕ್ಷೇತರು ಗೆದ್ದಿದ್ದಾರೆ. ಕಾಂಗ್ರೆಸ್ ನ ಪಾಲಿಕೆ ಸದಸ್ಯೆ ರಾಜೀನಾಮೆ ನೀಡಿದ ಕಾರಣ ಸಂಖ್ಯಾಬಲ 44ಕ್ಕೆ ಕುಸಿದಿದೆ. ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಚುನಾಯಿತ ಜನಪ್ರತಿನಿಧಿಗಳು ಮತ ಚಲಾಯಿಸುವ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಪಾಲಿಕೆಯ ಅಧಿಕಾರ ಹಿಡಿಯುವ ಕಸರತ್ತು ಮುಂದುವರಿಸಿವೆ.
ಬಿಜೆಪಿಯ ಓರ್ವ ಶಾಸಕರು, ಒಬ್ಬರು ಸಂಸದರು, ಏಳು ಎಂಎಲ್‌ಸಿಗಳು, ನಾಲ್ವರು ಪಕ್ಷೇತರರು ಸೇರಿ ಮೂವತ್ತು ಸ್ಥಾನ ಇದೆ ಎಂಬುದು ಕಮಲ ಪಡೆ ವಾದ. ಇನ್ನು ಕಾಂಗ್ರೆಸ್ ನ 21 ಪಾಲಿಕೆ ಸದಸ್ಯರು, ಓರ್ವ ಶಾಸಕರು, ಓರ್ವ ಜೆಡಿಎಸ್ ಸದಸ್ಯೆ, ಓರ್ವ ಪಕ್ಷೇತರ ಬೆಂಬಲ ಸೇರಿ 28 ಸಂಖ್ಯಾಬಲ ಹೊಂದಿದೆ. ಎರಡು ಪಕ್ಷಗಳು ವಿಪ್ ಜಾರಿಗೊಳಿಸಿದ್ದು, ಹೊರಗಿನ ಎಂಎಲ್‌ಸಿಗಳ ಸೇರ್ಪಡೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದರೆ, ಬಿಜೆಪಿ ನೀವು ಈ ಹಿಂದೆ ಮಾಡಿದ್ದನ್ನು ನಾವು ಈಗ ಮಾಡುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದೆ. ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
PublicNext
23/02/2021 07:48 pm