ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ರಾಜಕಾರಣ ನುಸುಳಿದೆ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ಜಗದ್ಗುರು ವಚನಾನಂದ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ಸಮಾವೇಶದ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ವಚನಾನಂದ ಸ್ವಾಮೀಜಿ, ''ಪಂಚಮಸಾಲಿ ಅಮೃತಬಂಧುಗಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ನಮ್ಮ ನಿಲುವಾಗಿದೆ. ಒಬ್ಬ ವ್ಯಕ್ತಿ ಅಥವಾ ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವ ಅವಶ್ಯಕತೆ ಇಲ್ಲ. ಯಾರದೋ ತೇಜೋವಧೆಯಿಂದ ಯಾರು ಏನು ಸಾಧಿಸಲು ಸಾಧ್ಯವಿಲ್ಲ. ಹೋರಾಟದಲ್ಲಿ ರಾಜಕಾರಣ ಬಂದಾಗ ನಾವು ಹಿಂದೆ ಸರಿಯುತ್ತೇವೆ, ಸಮುದಾಯದ ವಿಷಯ ಬಂದಾಗ ನಾವು ಮುಂಚೂಣಿಯಲ್ಲಿರುತ್ತೇವೆ'' ಎಂದು ಹೇಳಿದ್ದಾರೆ.
''ನಿನ್ನೆ ಸಮಾವೇಶ ನಡೆದ ನಂತರ ನಡೆದ ಘಟನೆಗಳು ಹೇಳಿಕೆಗಳು ಜನನಾಯಕರ ಹಿತಾಸಕ್ತಿಗೆ ಇಂಬು ನೀಡುವಂತಹದ್ದಾಗಿದ್ದವು. ಆದ್ದರಿಂದ ಆ ನಿರ್ಧಾರಗಳಿಗೆ ನಾವು ಬೆಂಬಲ ನೀಡಲಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬೆಳಗಿನ ಪಾದಯಾತ್ರೆಯನ್ನು ರದ್ದುಗೊಳಿಸಿದ್ದೆವು. ನಗರದ ಒಳಗೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ನಮ್ಮ ಹೋರಾಟವನ್ನು ಹಾಳು ಮಾಡುವ ಉದ್ದೇಶದಿಂದ ಗಲಾಟೆ ಪ್ರಾರಂಭಿಸಿದ್ದರೆ, ನಮ್ಮ ಸಮುದಾಯದ ಮೇಲೆ ಕಪ್ಪು ಚುಕ್ಕೆ ಬೀಳುವ ಅವಕಾಶ ಇರುತ್ತಿತ್ತು. ಈ ಹಿನ್ನಲೆಯಲ್ಲಿ ವಿಧಾನಸೌಧದ ಕಡೆಗೆ ಪಾದಯಾತ್ರೆಯಂತಹ ನಿರ್ಧಾರಗಳಿಗೆ ಬೆಂಬಲ ನೀಡಲಿಲ್ಲ” ಎಂದು ತಿಳಿಸಿದ್ದಾರೆ.
PublicNext
22/02/2021 06:57 pm