ನವದೆಹಲಿ : ಮೋದಿ ಆಡಳಿತ ಶುರುವಾದಾಗಿನಿಂದ ದುಬಾರಿ ದುನಿಯಾದಲ್ಲಿ ಜನ ತತ್ತರಿಸಿಹೋಗುತ್ತಿದ್ದಾರೆ. ಮೋದಿ ಸಾಮಾನ್ಯರ ಬದುಕಿಗೆ ಬರೆ ಎಳೆದು ಸ್ನೇಹಿತರನ್ನು ಬೆಳೆಸುತ್ತಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರ ಜೇಬನ್ನು ಖಾಲಿ ಮಾಡಿ ತಮ್ಮ ಸ್ನೇಹಿತರ ಜೇಬು ಭರ್ತಿ ಮಾಡುತ್ತಿದೆ ಎಂದು ರಾಗಾ ಲೇವಡಿ ಮಾಡಿದ್ದಾರೆ. ತೈಲ ಬೆಲೆಯಲ್ಲಿ ಬಿಜೆಪಿಯ ದರೋಡೆ ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರವನ್ನು ವ್ಯಂಗ್ಯೋಕ್ತಿಗಳಿಂದ ಚುಚ್ಚಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗುತ್ತಿದೆ ಎಂಬುದನ್ನು ಜನ ಮರೆಯಬಾರದು. ಆದರೂ, ಬಂಕ್ ಗಳಲ್ಲಿ ಪೆಟ್ರೋಲ್ , ಡೀಸೆಲ್ ಹಾಕಿಸುವಾಗ ದರದ ಮೀಟರ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ . ಪೆಟ್ರೋಲ್ ಲೀಟರ್ ಗೆ 100ರೂ. ದಾಟಿದೆ ಎಂದು ಅವರು ಸಿಡಿಮಿಡಿಗೊಂಡಿದ್ದಾರೆ. ಈ ಟ್ವಿಟ್ ಗೆ ಸಾಕಷ್ಟು ಮಂದಿ ರೀ ಟ್ವಿಟ್ ಮಾಡಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಯಾವುದೇ ಟ್ವಿಟ್ ಮಾಡಿದರೂ ನಾಕಾರಾತ್ಮಕ ಅಭಿಪ್ರಾಯಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದವು. ನೆಟ್ಟಿಗರು ರಾಹುಲ್ ಗಾಂಧಿ ಅವರನ್ನು ಹಿಗ್ಗಾಮುಗ್ಗ ಜಾಡಿಸುತ್ತಿದ್ದರು.
ಆದರೆ ಸದ್ಯ ರಾಗಾ ಟ್ವಿಟ್ ಗೆ ಬೆಂಬಲ ವ್ಯಕ್ತವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಕೆಲವರು ವ್ಯಂಗ್ಯವಾಡಿ, ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಹುತೇಕ ಮಂದಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ತಮ್ಮ ಸಿಟ್ಟನ್ನು ಹೊರ ಹಾಕಿ ರಾಹುಲ್ಗಾಂಧಿಗೆ ಬೆಂಬಲ ನೀಡಿದ್ದಾರೆ. ಮತ್ತೊಂದು ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಉದ್ಯೋಗ ಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
PublicNext
22/02/2021 12:40 pm