ಬೆಂಗಳೂರು: ಹಾವು ಚೇಳುಗಳ ಮಧ್ಯೆ ಕೆಲಸ ಮಾಡುತ್ತಿದ್ದಾರೆ ಎಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಹಾವು ಚೇಳುಗಳು ಯಡಿಯೂರಪ್ಪ ಅವರ ಮನೆಯಲ್ಲಿಯೇ ಇವೆ. ಹಾವು ಚೇಳುಗಳು ಬೇರೆ ಯಾರೂ ಅಲ್ಲ ವಿಜಯೇಂದ್ರ ಹಾಗೂ ಅವರ ಕುಟುಂಬದವರೇ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಸುಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮತ್ತೆ ಮುಂದುವರಿದಿದೆ. ಅವರ ಕುಟುಂಬದವರು ಸಿಎಂ ಯಡಿಯೂರಪ್ಪ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಇಡೀ ಕುಟುಂಬ ಸಿಎಂ ಕಚೇರಿ ಕಾವೇರಿಯಲ್ಲಿ ಇದೆ. ಸಿಎಂ ಬಿಎಸ್‍ವೈರನ್ನು ಕುಟುಂಬದವರು ಒಂದು ರೀತಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಸಿಎಂ ಆಗುವ ಮುಂಚೆ ಇವರ್ಯಾರು ಅವರ ಜೊತೆ ಇರಲಿಲ್ಲ. ಆ ಸಂದರ್ಭದಲ್ಲಿ ಅವರೆಲ್ಲಾ ಅವರ ಮನೆಯಲ್ಲಿ ಇರುತ್ತಿರಲಿಲ್ಲ. ಅಡುಗೆ ಮಾಡುವವರು ಒಬ್ಬರು, ಮತ್ತೋರ್ವರು ಮಾತ್ರ ಇರುತ್ತಿದ್ದರು. ಸಿಎಂ ಬಿಎಸ್‍ವೈ ಹೆಸರು ಕೆಡುತ್ತಿರುವುದು ಅವರ ಕುಟುಂಬಸ್ಥರಿಂದಲೇ. ಅದರಲ್ಲೂ ವಿಶೇಷವಾಗಿ ವಿಜಯೇಂದ್ರ ಹಸ್ತಕ್ಷೇಪದಿಂದ ಸಿಎಂ ಹೆಸರು ಕೆಡುತ್ತಿದೆ ಎಂದು ಯತ್ನಾಳ್ ಮತ್ತೆ ಗುಡುಗಿದ್ದಾರೆ.
PublicNext
15/02/2021 01:08 pm