ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಜಾತಿ ಸಮಾವೇಶ' ಬಗ್ಗೆ ಬಿಜೆಪಿಗೆ ಪ್ರಶ್ನೆಗಳ ಮಳೆ ಸುರಿದ ಸಿದ್ದರಾಮಯ್ಯ..!

ಬೆಂಗಳೂರು: ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿ ನಾಯಕರು ಸಾಲುಸಾಲಾಗಿ ನಿಂತು ಮೀಸಲಾತಿಗಾಗಿ ಕೂಗೆಬ್ಬಿಸಿರುವುದು ಪ್ರಾಮಾಣಿಕ ಜ್ಞಾನೋದಯವೇ? ಸಾಮಾಜಿಕ ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಇನ್ನೊಂದು ರಾಜಕೀಯ ಷಡ್ಯಂತ್ರವೇ? ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ''ಮಂಡಲ್ ವರದಿಯನ್ನು ವಿರೋಧಿಸಿ ಮೈಗೆ ಬೆಂಕಿಹಚ್ಚಿಕೊಂಡವರು ಯಾರು? ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸಿ ಬೀದಿಗಿಳಿದವರು ಯಾರು? ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರಾಮಾ ಜೋಯಿಸ್ ಯಾವ ಪಕ್ಷದವರು? ಉತ್ತರಿಸುವಿರಾ'' ಎಂದು ಪ್ರಶ್ನಿಸಿದ್ದಾರೆ.

''ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ? ಯಾರಾದರೂ ಉತ್ತರಿಸುವಿರಾ'' ಎಂದು ಕೇಳಿದ್ದಾರೆ.

ಮೀಸಲಾತಿಯನ್ನು ನೇರವಾಗಿ ವಿರೋಧಿಸಲಿಕ್ಕಾಗದ ಸಂಘ ಪರಿವಾರದ ನಾಯಕರು ವಿವಾದ ಸೃಷ್ಟಿಸಿ, ಸಮುದಾಯಗಳನ್ನು ಪರಸ್ಪರ ಕಾದಾಟಕ್ಕಿಳಿಸಿ ಸಾಮಾಜಿಕ ನ್ಯಾಯದ ಹೋರಾಟದ ಹಾದಿ ತಪ್ಪಿಸುವ ಕುಟಿಲ ಕಾರಸ್ಥಾನಕ್ಕೆ ಅಮಾಯಕ ಜನತೆ ಬಲಿಯಾಗಬಾರದು ಎಂದರು.

ರಾಜ್ಯದಲ್ಲಿ ಆಡಳಿತ ಪಕ್ಷದವರೇ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ? ಮರೆತುಬಿಟ್ಟಿದ್ದರೆ ನೆನಪಿಸಬಯಸುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರ. ಅಲ್ಲಿನ ಪ್ರಧಾನಿ ಮೋದಿ ಮತ್ತು ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿದರು.

ಈಗಿನ ಮೀಸಲಾತಿ ಬದಲಾವಣೆ-ಹೆಚ್ಚಳದ ಬೇಡಿಕೆಗೆ ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದ ಮೀಸಲಾತಿಯನ್ನು ಶೇ.73ಕ್ಕೆ ಹೆಚ್ಚಿಸಬೇಕೆಂದು ಕಾಂಗ್ರೆಸ್ ಸರ್ಕಾರವೇ ಮಾಡಿರುವ ಕಾನೂನು ಮಾತ್ರ ಪರಿಹಾರ. ಅದರ ಅನುಷ್ಠಾನ ಕೇಂದ್ರದ ಬಿಜೆಪಿ ಸರ್ಕಾರದ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೀಸಲಾತಿ ಹೆಚ್ಚಳಕ್ಕಾಗಿ ಆಧಾರ ಕೋರುತ್ತಿರುವ ನ್ಯಾಯಾಲಯಕ್ಕೆ ಕರ್ನಾಟಕದಲ್ಲಿ ನಡೆದಿರುವ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೇ ಉತ್ತರ. ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಮೊದಲು ನಡೆಸಿದ್ದ ಈ ಸಮೀಕ್ಷೆಯನ್ನು ಸ್ವೀಕರಿಸಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದುರು.

Edited By : Vijay Kumar
PublicNext

PublicNext

14/02/2021 04:51 pm

Cinque Terre

68.24 K

Cinque Terre

5

ಸಂಬಂಧಿತ ಸುದ್ದಿ