ಬೆಂಗಳೂರು: ಟೊಯೋಟಾ ಕಾರ್ಮಿಕರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸಚಿವರು ಇಂದು ಬೆಂಗಳೂರಿನ ಖನಿಜ ಭವನದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಟೊಯೋಟಾ ಕಂಪನಿಯ ಅಧಿಕಾರಿಗಳು, ಕಾರ್ಮಿಕ ಮುಖಂಡರುಗಳೊಂದಿಗೆ ವಿಸ್ತ್ರತ ಚರ್ಚೆ ನಡೆಸಿದರು. ಈ ವೇಳೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಂಸದರಾದ ಡಿ.ಕೆ ಸುರೇಶ್, ಮಾಗಡಿ ಶಾಸಕ ಎ. ಮಂಜು, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರು ಹಾಗೂ ಟೊಯೋಟಾ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಲಾಯಿತು. ತನಿಖೆಯ ಉದ್ದೇಶದಿಂದ ಸಸ್ಪೆಂಡ್ ಮಾಡಿರುವ ಕಾರ್ಮಿಕರನ್ನು ಕೆಲಸಕ್ಕೆ ತಗೆದುಕೊಳ್ಳಬೇಕು ಹಾಗೂ ಒಂದು ಸಮಯದ ಕಾಲಮಿತಿಯಲ್ಲಿ ತನಿಖೆಯನ್ನು ಪೂರೈಸುವ ಭರವಸೆಯನ್ನು ನೀಡಬೇಕು ಎನ್ನುವ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.
ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಮಾತನಾಡಿ, ''ಕಾರ್ಮಿಕರು ಹಾಗೂ ಕಂಪನಿಯ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯವಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಇರುವ ವಾತಾವರಣದ ಬಗ್ಗೆ ಒಂದು ಸಕಾರಾತ್ಮಕ ಸಂದೇಶ ನೀಡುವುದು ಹಾಗೂ ಅದರ ಜೊತೆಯಲ್ಲಿಯೇ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದು ರಾಜ್ಯ ಸರಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರ ಸರಿಪಡಿಸಿಕೊಳ್ಳಬೇಕು'' ಎಂದು ಸಲಹೆ ನೀಡಿದರು.
PublicNext
08/02/2021 04:28 pm