ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಪೊಲೀಸರ ವಿರುದ್ಧ ಉತ್ತರ ಪ್ರದೇಶದ ಲಕ್ನೋ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಧರಣಿ ನಡೆಸಿದ್ದಾರೆ.
ಪ್ರಹ್ಲಾದ್ ಮೋದಿ ಅವರು ಯೋಗ ಸೋಷಿಯಲ್ ಸೊಸೈಟಿಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬುಧವಾರ ಲಕ್ನೋಗೆ ಆಗಮಿಸಿದ್ದರು. ಅವರನ್ನು ಬರಮಾಡಿಕೊಳ್ಳೋಕೆ ಅವರ ಬೆಂಬಲಿಗರು ಧಾವಿಸಿದ್ದರು. ಆದರೆ ವಿಮಾನ ನಿಲ್ದಾಣದ ಹೈ ಸೆಕ್ಯೂರಿಟಿ ಝೋನ್ನಲ್ಲಿ ಸೆಕ್ಷನ್ 144 ಉಲ್ಲಂಘಿಸಿದ್ದಾರೆಂದು ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರ ನಡೆಯನ್ನ ಖಂಡಿಸಿದ ಪ್ರಹ್ಲಾದ್, ಪೊಲೀಸರ ವಿರುದ್ಧ ಒಂದೂವರೆ ಗಂಟೆ ಏಕಾಂಗಿ ಪ್ರತಿಭಟನೆ ನಡೆಸಿದರು.
ಪ್ರಧಾನಿ ಕಚೇರಿಯ ಆದೇಶದ ಮೇರೆಗೆ ನನ್ನ ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವುದೇ ಆದೇಶದ ಪ್ರತಿಯನ್ನು ನನಗೆ ತೋರಿಸಲಿಲ್ಲ. ಉತ್ತರ ಪ್ರದೇಶದ ಪೊಲೀಸರು ಯಾವುದೇ ಕಾರಣವಿಲ್ಲದೆ ಯಾರನ್ನ ಬೇಕಾದರೂ ಬಂಧಿಸಬಹುದಾ ಎಂದು ಪ್ರಹ್ಲಾದ್ ಪ್ರಶ್ನಿಸಿದರು. ಕೊನೆಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ವಶಕ್ಕೆ ಪಡೆದಿದ್ದ ಬೆಂಬಲಿಗರನ್ನ ಬಿಡುಗಡೆಗೊಳಿಸಿದ ನಂತರ ಪ್ರಹ್ಲಾದ್ ತಮ್ಮ ಧರಣಿ ಅಂತ್ಯಗೊಳಿಸಿದರು ಎಂದು ವರದಿಯಾಗಿದೆ.
PublicNext
04/02/2021 08:01 am