ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಗದ್ದುಗೆ ಏರಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬಿಗ್ ಫೈಟ್ ಆರಂಭವಾಗಿದೆ.
ಮೇಯರ್ ಗದ್ದುಗೆ ಹಿಡಿಯಲು ಶತಾಯಗತವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಯತ್ನ ನಡೆಸುತ್ತಿದ್ದು, ಈಗ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಗದ್ದುಗೆ ಏರಲುಸಾಧ್ಯತೆ ದಟ್ಟವಾಗಿದೆ.
ಅನ್ಯ ಜಿಲ್ಲೆಯ ಜನಪ್ರತಿನಿಧಿಗಳನ್ನು ಮತದಾರರ ಪಟ್ಟಿಗೆ ಅಕ್ರಮ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿ ಪಾಲಿಕೆಯ ಕಾಂಗ್ರೆಸ್ ನ ಸದಸ್ಯರು, ಮುಖಂಡರು ಪ್ರತಿಭಟನೆ ನಡೆಸಿದರು. ಬಿಜೆಪಿ, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ ಆಯುಕ್ತರ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ದಾವಣಗೆರೆ ನಿವಾಸಿ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಹಾಗೂ ಸಚಿವ ಆರ್. ಶಂಕರ್ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವುದು ಅಕ್ರಮ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಆರೋಪ ಮಾಡಿದ್ದಾರೆ.
ಕಳೆದ ಬಾರಿ ಪಾಲಿಕೆ ಮೇಯರ್ ಚುನಾವಣೆ ಸಂದರ್ಭದಲ್ಲೂ ಅನ್ಯ ಜಿಲ್ಲೆಯ ಎಂಎಲ್‌ಸಿಗಳ ಸೇರ್ಪಡೆ ಆಗಿತ್ತು. ಈ ಬಾರಿಯೂ ಅಧಿಕಾರಿಗಳು ಅದೇ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಕೆಲವು ಎಂಎಲ್‌ಸಿಗಳು ಕೇವಲ ಮೇಯರ್ ಚುನಾವಣೆ ಮಾತ್ರ ಬರುತ್ತಾರೆ. ಅವರಿಂದ ದಾವಣಗೆರೆ ನಗರಕ್ಕೆ ಯಾವುದೇ ಅನುದಾನ ದೊರೆತಿಲ್ಲ. ದಾವಣಗೆರೆ ನಿವಾಸಿಗಳಲ್ಲದ ಎಂಎಲ್‌ಸಿಗಳ ಹೆಸರನ್ನು ಮತದಾರ ಪಟ್ಟಿಗೆ ಸೇರಿಸದಂತೆ ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಬಿಜೆಪಿ ಸದಸ್ಯ ಪ್ರಸನ್ನ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅನ್ಯ ಮಾರ್ಗದಲ್ಲಿ ಅಧಿಕಾರ ಹಿಡಿಯುವುದನ್ನು ಬಿಟ್ಟು ನ್ಯಾಯ ಮಾರ್ಗದಲ್ಲಿ ನಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಸನ್ನಕುಮಾರ್ ರನ್ನು ತರಾಟೆಗೆ ತೆಗೆದುಕೊಂಡರು.
ಪಾಲಿಕೆಯ 44 ಸದಸ್ಯ ಸ್ಥಾನಗಳಲ್ಲಿ 23 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್, 4 ಪಕ್ಷೇತರ ಬಲವಿದೆ.
PublicNext
03/02/2021 04:43 pm