ನವದೆಹಲಿ: ಭಾರತದಲ್ಲಿ ಮುಸ್ಲಿಮರು ಆತಂಕದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.
ಹಮೀದ್ ಅನ್ಸಾರಿ ತಮ್ಮ 'ಬೈ ಮೆನಿ ಎ ಹ್ಯಾಪಿ ಆ್ಯಕ್ಸಿಡೆಂಟ್: ರಿಕಲೆಕ್ಷನ್ ಆಫ್ ಎ ಲೈಫ್' ಎಂಬ ಆತ್ಮಚರಿತ್ರೆಯ ಪ್ರಚಾರಕ್ಕಾಗಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಷ್ಟ್ರೀಯ ಮಾಧ್ಯಮವೊಂದರ ನಿರೂಪಕ ಸಂದರ್ಶನ ತೆಗೆದುಕೊಂಡರು. ಇದು ಅವರು ಉಪ ರಾಷ್ಟ್ರಪತಿ ಸ್ಥಾನದಿಂದ ತೆಳಗಿಳಿದ ಮೇಲೆ ನಡೆದ ಮೊದಲ ಸಂದರ್ಶನವಾಗಿದೆ.
ಸಂದರ್ಶನದಲ್ಲಿ ನ್ಯೂಸ್ ಆಂಕರ್ ಅವರು, ದೇಶದಲ್ಲಿ ಮುಸ್ಲಿಮರಿಗೆ ಆತಂಕ ಇದೆ ಎನ್ನುವುದಕ್ಕೆ ಕಾರಣ ಕೊಡಿ ಎಂದು ಕೇಳುತ್ತಾರೆ. ಈ ವೇಳೆ ಕೋಪಗೊಂಡ ಅನ್ಸಾರಿ ಅವರು, ನೀವು ಇಲ್ಲಿಗೆ ಯಾಗೆ ಬಂದಿದ್ದೀರಿ? ನನ್ನ ಪುಸ್ತಕ ಓದಿ. ಇಲ್ಲಿಗೆ ಬನ್ನಿ ಅಂತ ನಾನು ನಿಮ್ಮನ್ನ ಬರುವಂತೆ ಕೇಳಿದ್ನಾ ಎಂದು ಪ್ರಶ್ನಿಸಿದರು.
''ಸಿಎಎ, ತ್ರಿವಳಿ ತಲಾಖ್, ರಾಮ್ ಮಂದಿರ ಸೇರಿದಂತೆ ಇತ್ತೀಚಿನ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರಗಳು ನೀವು ಹೇಳಿದಂತೆ ಭಾರತೀಯ ಮುಸ್ಲಿಮರಿಗೆ ಅಸುರಕ್ಷಿತ ಭಾವನೆ ಮೂಡಿಸಿದೆಯೇ'' ಎಂದು ಆಂಕರ್ ಪ್ರಶ್ನಿಸುತ್ತಾರೆ. ಈ ವೇಳೆ ಉತ್ತರ ನೀಡಲು ನಿರಾಕರಿಸಿದ ಅನ್ಸಾರಿ ಅವರು, ''ಒಂದೇ ಕಾರಣವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ನನಗಿಂತ ಜನರಿಗೆ ಹೆಚ್ಚು ಗೊತ್ತಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ'' ಎಂದು ಹೇಳುತ್ತಾರೆ.
ಗುಂಪು ದ್ವೇಷ ದಾಳಿ (ಲಿಂಚಿಂಗ್) ವಿಚಾರದ ಪ್ರಶ್ನೆಗೆ ಉತ್ತರಿಸಿದ ಅನ್ಸಾರಿ ಅವರು, ''ಅಂತಹ ಘಟನೆ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ. ಹಿಂದೂಗಳ ಮೇಲೂ ದಾಳಿಯಾಗಿರಬಹುದು ನನಗೆ ಅದರ ಬಗ್ಗೆ ಗೊತ್ತಿಲ್ಲ. ನಿಮಗೆ ಹೆಚ್ಚು ಜ್ಞಾನವಿದೆ'' ಎಂದು ಕೋಪದಲ್ಲಿಯೇ ಅಲ್ಲಿಂದ ಹೊರ ನಡೆಯುತ್ತಾರೆ.
PublicNext
31/01/2021 06:34 pm