ಬೆಳಗಾವಿ: ಮಹಾರಾಷ್ಟ್ರ, ಮರಾಠಿ ಜನರು ಪೂಜಿಸುವ ಛತ್ರಪತಿ ಶಿವಾಜಿ ಮಹಾರಾಜರ ಮೂಲ ನೆಲ ಕರ್ನಾಟಕ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಇತಿಹಾಸ ಗೊತ್ತಿಲ್ಲ. ಶಿವಾಜಿ ಮಹಾರಾಜರು ಕರ್ನಾಟಕ ಮೂಲದವರು ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಇವರ ವಂಶದ ಮೂಲ ಕರ್ನಾಟಕದಲ್ಲಿ ಇದ್ದರು. ಶಿವಾಜಿ ಮಹಾರಾಜರ ವಂಶದ ಮೂಲಪುರುಷ ಬೆಳ್ಳಿಯಪ್ಪ ಅವರು ಗದಗ ಜಿಲ್ಲೆಯ ಸೊರಟೂರಿನವರು ಎಂಬುದು ನಮಗೆ ಹೆಮ್ಮೆಯ ವಿಷಯ. ಕರ್ನಾಟಕದಲ್ಲಿ ಬರಗಾಲ ಇದ್ದಾಗ ಬೆಳ್ಳಿಯಪ್ಪ ಅವರು ಇಲ್ಲಿಂದ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಾರೆ. ಇಲ್ಲಿಂದ ಹೋದ ಬೆಳ್ಳಿಯಪ್ಪ ಮಹಾರಾಷ್ಟ್ರದಲ್ಲಿ ನೆಲೆಸುತ್ತಾರೆ. ಈ ವಂಶದ ನಾಲ್ಕನೇ ತಲೆಮಾರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬರುತ್ತಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕನ್ನಡಿಗರು-ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ಅಣ್ಣ ತಮ್ಮಂದಿರಂತೆ ಇರುವಾಗ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹುಳಿ ಹಿಂಡುವ ಕೆಲಸ ಮಾಡಬಾರದು. ತಮ್ಮ ಅಧಿಕಾರ ಉಳಿಸಿಕೊಳ್ಳಲು ಠಾಕ್ರೆ ಇಂಥ ಕುಲಗೆಡಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದರು.
PublicNext
31/01/2021 03:49 pm