ಬಂಟ್ವಾಳ: ಜನಪ್ರಿಯತೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೆ ಗಡಿ ವಿಚಾರ ತೆಗೆಯುತ್ತಿದ್ದಾರೆ ಎಂದು ಹೇಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಹಾಜನ್ ವರದಿ ರಿಪೋರ್ಟ್ ಕೊಟ್ಟ ಬಳಿಕವೂ ಹುಚ್ಚು ಹೇಳಿಕೆ ಕೊಡುತ್ತಿರುವ ಅವರನ್ನು ಹುಚ್ಚ ಅಂತ ಕರಿಬೇಕಾಗುತ್ತೆ ಎಂದರು.
ಬಂಟ್ವಾಳದಲ್ಲಿ ಭಾನುವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಆಗಮಿಸಿದ ಸಂದರ್ಭ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಗಡಿ ಕ್ಯಾತೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವ ವ್ಯಕ್ತಿಯ ಜನಪ್ರಿಯತೆ ಕಡಿಮೆಯಾಗುತ್ತದೋ ಆಗ ಆತ ಯಾರು ಬಲಿಷ್ಠ ನಾಗಿರುತ್ತಾನೋ ಅವನಿಗೆ ಬೈಯುತ್ತಾನೆ. ಮಹಾರಾಷ್ಟ್ರ ಸಿಎಂ ಪಾಪ್ಯುಲಾರಿಟಿ ಕಡಿಮೆಯಾಗುತ್ತಿದೆ. ಕರ್ನಾಟಕದ ಭೂಮಿ ಬಗ್ಗೆ ಮಾತನಾಡಿದರೆ ಮರಾಠಿಗರು ತನ್ನ ಪರವಾಗಿ ಇರುತ್ತಾರೆ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದರು.
ಬಸವರಾಜ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಈಶ್ವರಪ್ಪ, ಅದನ್ನು ಬಿಟ್ಟು ಬೇರೆ ಏನಾದರೂ ಕೇಳಿ ಉತ್ತರಿಸುತ್ತೇನೆ. ಆ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ನಾವೆಲ್ಲರೂ ಇವತ್ತು ಮೀಟಿಂಗ್ ಮಾಡಿದ್ದೇವೆ. ಹಾಗೆಂದು ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ ಈಶ್ವರಪ್ಪ, ಬಿಜೆಪಿಯ ಶಾಸಕರು ಪ್ರತ್ಯೇಕ ಸಭೆ ನಡೆಸುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ್ದಿಲ್ಲ. ಬಿಜೆಪಿಯಲ್ಲಿ ಮೂಲ ಬಿಜೆಪಿ, ವಲಸೆ ಬಿಜೆಪಿ ಎಂದಿಲ್ಲ. ಅವೆಲ್ಲವೂ ಮಾಧ್ಯಮ ಸೃಷ್ಟಿ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತರಿದ್ದರು.
PublicNext
31/01/2021 02:26 pm