ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಉಪಸ್ಥಿತಿ ಕುರಿತು ಖಚಿತ ಮಾಹಿತಿ ಪಡೆದು ಭಾರತೀಯ ಸೇನೆಯು ಶುಕ್ರವಾರ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿತ್ತು. ಇದರಿಂದ ತತ್ತರಿಸಿದ ಇಬ್ಬರು ಉಗ್ರರು ಶನಿವಾರ ಸೇನಾಧಿಕಾರಿಗಳ ಮುಂದೆ ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಿದ್ದಾರೆ.
ಭದ್ರತಾ ಪಡೆಯು ಕಾಕಪೋರಾದ ಲೆಲ್‌ಹಾರ್ ಪ್ರದೇಶವನ್ನು ಸುತ್ತುವರಿದಿತ್ತು. ಈ ವೇಳೆ ಮಾಹಿತಿ ತಿಳಿಯುತ್ತಲೇ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಇದರಿಂದಾಗಿ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತ್ತು. ರಾತ್ರಿಯಿಡೀ ಗುಂಡಿನ ಚಕಮಕಿಯ ಬಳಿಕ, ಇಬ್ಬರು ಉಗ್ರರು ತಮ್ಮ ಎರಡು ಎಕೆ ರೈಫಲ್‌ಗಳೊಂದಿಗೆ ಭದ್ರತಾ ಪಡೆಗಳ ಮುಂದೆ ಶರಣಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದ ಉಗ್ರರನ್ನು ಅಕೀಲ್ ಅಹ್ಮದ್ ಲೋನ್ ಮತ್ತು ರೂಫ್ ಉಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಅಕೀಲ್ ಅಹ್ಮದ್ ಲೋನ್ ಬಲಗಾಲಿನಲ್ಲಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಇಲ್ಲಿನ ಪೊಲೀಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
PublicNext
30/01/2021 11:08 am