ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಇಂದು ಬೆಳಿಗ್ಗೆ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಸಚಿವರಿಗೆ ಕೆಲ ಹೊತ್ತು ನಡೆಯಬೇಕು ಎನಿಸಿತಂತೆ. ಕೂಡಲೇ ಕಾರು ಸೈಡ್ ಹಾಕಿಸಿದ ಸುರೇಶ್ ಕುಮಾರ್ ಹೆದ್ದಾರಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಸ್ವಲ್ಪ ಹೊತ್ತು ಮುಂದೆ ಸಾಗಿದಾಗ ಟಿವಿಎಸ್ ಎಕ್ಸೆಲ್ ಗಾಡಿಯ ಮೇಲೆ ಬಂದ ವ್ಯಕ್ತಿಯೊಬ್ಬರು ಸಚಿವ ಸುರೇಶ್ ಕುಮಾರ್ ಅವರಿಗೆ ಎದುರಾಗಿದ್ದಾರೆ. ಸಚಿವರು ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ವ್ಯಕ್ತಿ, ಕೂಡಲೇ ಗಾಡಿ ನಿಲ್ಲಿಸಿ ಸಚಿವರ ಬಳಿ ಬಂದು ಚಪ್ಪಲಿ ಕಳೆದು ನಮಸ್ಕರಿಸಿದ್ದಾರೆ.
ಈ ಸಂಗತಿಯನ್ನು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡ ಸಚಿವ ಸುರೇಶ್ ಕುಮಾರ್, ಸಾರ್ವಜನಿಕ ಬದುಕಿನಲ್ಲಿ ಆಗಾಗ ನಡೆಯುವ ಇಂತಹ ಪ್ರಸಂಗಗಳು ಕಸಿವಿಸಿ ಉಂಟು ಮಾಡುತ್ತವೆ ಎಂದಿದ್ದಾರೆ.
ಹೀಗೆ ಬದಿಗೆ ಚಪ್ಪಲಿ ಕಳಚಿ ಸಚಿವರಿಗೆ ನಮಸ್ಕರಿಸಿದ ವ್ಯಕ್ತಿ ಸ್ಥಳೀಯ ಕಿರಾಣಿ ವ್ಯಾಪಾರಸ್ಥ ವಿಜಯಕುಮಾರ್. ಯಾಕೆ ಚಪ್ಪಲಿ ಕಳಚಿದ್ದೀರಿ? ಹಾಕಿಕೊಂಡೇ ಮಾತನಾಡಿ ಎಂದು ಸಚಿವ ಸುರೇಶ್ ಕುಮಾರ್ ಎಷ್ಟೇ ಹೇಳಿದರೂ ವಿಜಯಕುಮಾರ್ ಅವರು ತಮ್ಮ ಮಾತು ಮುಗಿಯುವವರೆಗೂ ಚಪ್ಪಲಿ ಹಾಕಲಿಲ್ಲ. ತಮ್ಮ ಇಬ್ಬರು ಮಕ್ಕಳು 2ನೇ ಹಾಗೂ 4ನೇ ತರಗತಿ ಓದುತ್ತಿದ್ದು, ನಿಯಮಿತವಾಗಿ ತರಗತಿಗಳು ಯಾವಾಗ ಆರಂಭವಾಗುತ್ತವೆ ಎಂಬುದನ್ನು ಕೇಳಿ ತಿಳಿಯಲು ಸಚಿವರನ್ನು ಮಾತನಾಡಿಸಿದ್ದಾರೆ.
ಆ ವ್ಯಕ್ತಿಯ ಮುಗ್ಧತೆ ನನ್ನ ಮನಸ್ಸನ್ನು ಬಹಳ ಸಮಯ ಕಾಡಿತು. ಇಂತಹ ಹಲವು ಪ್ರಸಂಗಗಳು ಮುಜುಗುರ ಉಂಟು ಮಾಡುವ ಜೊತೆಗೆ ಇಂತವರು ನನ್ನ ಮೇಲೆ ಇಟ್ಟಿರುವ ಭಾವನೆ, ನನ್ನ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
24/01/2021 12:03 pm