ಬೆಂಗಳೂರು: ಕೇಂದ್ರ ಸರ್ಕಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಕಾರಣಕ್ಕಾಗಿ ಹಿರಿಯ ಭಾಷಾ ತಜ್ಞ ಹಾಗೂ ಮೇರು ಸಾಹಿತಿ ಡಾ. ಹಂ.ಪ ನಾಗರಾಜಯ್ಯ ಅವರನ್ನು ಕರೆಸಿಕೊಂಡ ಮಂಡ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತು ಅವರಿಂದ ಈ ಬಗ್ಗೆ ಹೇಳಿಕೆ ಪಡೆದು ವಾಪಸ್ ಕಳುಹಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ನಾಡಿನ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದಿದ್ದಾರೆ. ಮಂಡ್ಯದಲ್ಲಿ ಕಳೆದ ಜ.17ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಅವರು, ಕೇಂದ್ರ ಸರ್ಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಹಂ.ಪ.ನಾ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಹೇಳಿಕೆ ಪಡೆದು ಕಳುಹಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ಸಾಹಿತ್ಯ ವಲಯದ ಪ್ರಮುಖರು ಸಿಡಿದೆದ್ದಿದ್ದು, ಹಂ.ಪ.ನಾ ಅವರಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ನ್ಯಾ.ಗೋಪಾಲಗೌಡ, ನ್ಯಾ.ಎ.ಜೆ. ಸದಾಶಿವ, ಬರಗೂರು ರಾಮಚಂದ್ರಪ್ಪ, ನ್ಯಾ. ನಾಗಮೋಹನದಾಸ್, ಡಾ.ಜಿ. ರಾಮಕೃಷ್ಣ, ಬಸವರಾಜ ಸಬರದ, ಸುಕನ್ಯಾ ಮಾರುತಿ, ಸಿದ್ಧನಗೌಡ ಪಾಟೀಲ್, ಕೆ. ಶರೀಫಾ, ಭಕ್ತರಹಳ್ಳಿ ಕಾಮರಾಜ್, ಆರ್.ಜಿ. ಹಳ್ಳಿ ನಾಗರಾಜ್, ಗುರುಶಾಂತ್, ಗುಡಿಹಳ್ಳಿ ನಾಗರಾಜ್, ಬಿ. ಕೆ.ಎಸ್. ವಿಮಲಾ ಎಚ್.ಆರ್. ಸ್ವಾಮಿ, ಬಿ. ರಾಜಶೇಖರ ಮೂರ್ತಿ, ಸೇರಿದಂತೆ ಹಲವಾರು ಸಾಹಿತಿಗಳು ಹಾಗೂ ವಿಚಾರವಾದಿಗಳು ಪೊಲೀಸರ ಈ ನಡೆಯನ್ನು ಖಂಡಿಸಿದ್ದಾರೆ.
PublicNext
22/01/2021 06:56 pm