ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರಲ್ಲಿ ಹೆಚ್ಚು ಬಂಡವಾಳ: ಜಗದೀಶ್ ಶೆಟ್ಟರ್

ತುಮಕೂರು: ರಾಜ್ಯದಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ ತುಮಕೂರಿನಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಿಸಲಾಗುತ್ತಿರುವ ಉದ್ಯೋಗ ಭವನದ ಭೂಮಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ಮಷಿನ್ ಟೂಲ್ಸ್ ಪಾರ್ಕ್, ಫುಡ್ ಪಾರ್ಕ್, ಜಪಾನೀಸ್ ಕೈಗಾರಿಕಾ ಪ್ರದೇಶ ಹೀಗೆ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಮುಖ ಕೈಗಾರಿಕೆಗಳು ತಮ್ಮ ಕಾರ್ಖಾನೆಗಳನ್ನು ಪ್ರಾರಂಭಿಸಿವೆ ಎಂದರು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಿದ ನಂತರ ನಿಗದಿಪಡಿಸುವ ದರ ತುಂಬಾ ಹೆಚ್ಚಿರುವ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯದ ಕೈಗಾರಿಕಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜತೆ ಸಭೆ ನಡೆಸಲಾಗುತ್ತದೆ. ಈ ಕೈಗಾರಿಕಾ ಪ್ರದೇಶದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದು, ಶೀಘ್ರ ಇದನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಲೀಸ್ ಕಾಲಾವಧಿ ವಿಸ್ತರಣೆ

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂಕ್ತ ವೇತನ, ಊಟದ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ವಂಸತನರಸಾಪುರದಲ್ಲಿ ಉದ್ಯೋಗ ಭವನ ನಿರ್ಮಿಸುತ್ತಿರುವುದು ಖುಷಿ ತಂದಿದೆ. ನಗರದಿಂದ 20 ಕಿಮೀ ದೂರವಿದ್ದು, ಸುಮಾರು 2 ಸಾವಿರ ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕಾಗಿದೆ. ಹಲವಾರು ಕಂಪನಿಗಳ ಲೀಸ್ ಕಾಲಾವಧಿ ಮುಗಿದಿದ್ದು, ಕೆಲವು ಬ್ಯಾಂಕ್ಗಳು ಸಾಲ ಸೌಲಭ್ಯ ನೀಡಲಾಗುವುದಿಲ್ಲ ಎನ್ನುತ್ತಿವೆ. ಲೀಸ್ ಕಾಲಾವಧಿಯನ್ನು ಕೆಲವು ವರ್ಷಗಳವರೆಗೆ ಮುಂದುವರಿಸುವ ಕುರಿತು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದರು.

ನೂತನವಾಗಿ ನಿರ್ಮಿಸಲಾಗುವ ಕೈಗಾರಿಕಾ ಪ್ರದೇಶಗಳಲ್ಲಿ ಸಮಸ್ಯೆಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂತಿಮ ಹಂತದಲ್ಲಿ ನಿಗದಿಪಡಿಸುವ ದರ ಶೇ.20ಕ್ಕಿಂತ ಹೆಚ್ಚಾಗಿರಬಾರದು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಡಾ.ಜಿ.ಪರಮೇಶ್ವರ್, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ಶಿವಶಂಕರ್, ಉಪಾಧ್ಯಕ್ಷ ರಾಮಮೂರ್ತಿ, ಕಾರ್ಯದರ್ಶಿಗಳಾದ ಹರೀಶ್, ಸತ್ಯನಾರಾಯಣ್, ಎಫ್ಕೆಸಿಸಿ ಗೋಪಾಲರೆಡ್ಡಿ, ಕೆಎಸ್ಎಸ್ಐಡಿಸಿ ದತ್ತಾತ್ರೇಯ, ಕೆಐಎಡಿಬಿಯ ಸಿಇಒ ಶಿವಶಂಕರ್ ಮತ್ತಿತರರಿದ್ದರು.

ವಿಮಾನ ನಿಲ್ದಾಣ ನಿರ್ಮಾಣ

ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶವು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ರೈತರು ಜಮೀನನ್ನು ನೀಡಿದ್ದು, ಅವರಿಗೆ ಯಾವುದೇ ಅನ್ಯಾಯವಾಗದೇ ಜಮೀನಿಗೆ ತಕ್ಕ ಪರಿಹಾರ ನೀಡಲಾಗಿದೆ. ಈಗಾಗಲೇ ರೈಲು ಹಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ. ಇದರಿಂದ ಬೆಳಗಾವಿ, ದಾವಣಗೆರೆ ಭಾಗದ ಜನರಿಗೆ ಹಾಗೂ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ಶೀಘ್ರ ಪದಾಧಿಕಾರಿಗಳ ಸಭೆ

ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ನಿಗದಿಪಡಿಸಲಾಗುವ ಕೈಗಾರಿಕಾ ನಿವೇಶನಗಳ ದರದ ಬಗ್ಗೆ ರಾಜ್ಯಾದ್ಯಂತ ಬಹಳಷ್ಟು ದೂರುಗಳು ಬಂದಿವೆ. ನಿವೇಶನಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ತೆಗೆದುಕೊಳ್ಳುವ ದರ ಹಾಗೂ ಅಂತಿಮವಾಗಿ ನಿರ್ಧರಿಸುವ ದರ ಬಹಳಷ್ಟು ಜಾಸ್ತಿ ಎನ್ನುವುದು ಕೈಗಾರಿಕೋದ್ಯಮಿಗಳ ದೂರಾಗಿದೆ. ಜಮೀನಿನ ಮಾಲೀಕರಿಗೆ ನೀಡುವ ಪರಿಹಾರ ಹಾಗೂ ಅಭಿವೃದ್ಧಿಗೆ ಆಗುವ ಖರ್ಚು ಸೇರಿಕೊಳ್ಳುವ ಹಿನ್ನೆಲೆಯಲ್ಲಿ ದರ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳ ಕೈಗಾರಿಕಾ ಸಂಘಗಳ ಪದಾಧಿಕಾರಿಗಳ ಜತೆ ಸಭೆ ನಡೆಸಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕೃಪೆ:ವಿ.ಕ

Edited By : Nirmala Aralikatti
PublicNext

PublicNext

22/01/2021 01:17 pm

Cinque Terre

62.92 K

Cinque Terre

2

ಸಂಬಂಧಿತ ಸುದ್ದಿ