ಬೆಂಗಳೂರು: ಇಂದು ನೂತನ 7 ಸಚಿವರಿಗೆ ಖಾತೆ ಹಂಚಿಕೆ ಜೊತೆಗೆ ಹಲವು ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದ್ದು, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಿದೆ.
ಕೆ. ಸುಧಾಕರ್, ಜೆ.ಸಿ ಮಾಧುಸ್ವಾಮಿ ಹಾಗೂ ಗೋಪಾಲಯ್ಯ ಅಸಮಾಧಾನ ಹೊಂದಿದ್ದಾರೆಂದು ತಿಳಿದುಬಂದಿದೆ. ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಿತ್ತುಕೊಂಡು ಆರೋಗ್ಯ ಇಲಾಖೆ ಉಳಿಸಿದ್ದಾರೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ವೈದ್ಯಕೀಯ ಖಾತೆ ವಾಪಸ್ಸು ಪಡೆದರೆ ರಾಜೀನಾಮೆ ನೀಡುವ ಸಂದೇಶವನ್ನು ರವಾನಿಸಿರುವ ಮಾಹಿತಿ ಇದೆ. ಈ ಹಿಂದೆ ಸುಧಾಕರ್ ಬಳಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಎರಡು ಖಾತೆಗಳಿದ್ದವು.
ಇನ್ನು ರೈತರ ಜತೆ ಇರಬಹುದಾದ ಖಾತೆ(ಸಣ್ಣ ನೀರಾವರಿ) ಬದಲಾವಣೆಗೆ ಜೆ.ಸಿ.ಮಾಧುಸ್ವಾಮಿ ಆಕ್ರೋಶಗೊಂಡು ತಮ್ಮ ರಾಜೀನಾಮೆ ಪತ್ರವನ್ನು ಆಪ್ತ ಸಹಾಯಕನಿಗೆ ನೀಡಿ ಜೆಸಿ ಪುರಕ್ಕೆ ವಾಪಸಾಗಿದ್ದಾರೆಂದು ತಿಳಿದುಬಂದಿದೆ. ಸಣ್ಣ ನೀರಾವರಿ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸಾಧ್ಯತೆ ಇರುವುದರಿಂದ ಅಸಮಾಧಾನ ಹೊಂದಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ಗೋಪಾಲಯ್ಯರಿಗೆ ಆಹಾರ ಖಾತೆಯ ಬದಲು ಸಕ್ಕರೆ ಮತ್ತು ತೋಟಗಾರಿಗೆ ಖಾತೆ ಬದಲಾವಣೆಯಿಂದ ಅಸಮಾಧಾನ ಹೊಂದಿದ್ದಾರೆಂದು ಹೇಳಲಾಗಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ಖಾತೆಗಳ ಬದಲಾವಣೆ ಬದಲಾವಣೆ ಬೇಡಿ ಎಂದು ಸಿಎಂಗೆ ಪಟ್ಟು ಹಿಡಿದಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
PublicNext
21/01/2021 10:38 am